Thu. Mar 5th, 2026

ತುಂಗಭದ್ರಾ ಡ್ಯಾಂಗೆ ಹೊಸ ಗೇಟ್ ಅಳವಡಿಕೆ: ಎರಡನೇ ಬೆಳೆಗೆ ಸಿಗಲ್ಲ ನೀರು..!

Share this with Friends

ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ‌ ತುಂಗಭದ್ರಾ ಬೋರ್ಡ್ ನ ತೀರ್ಮಾನದಂತೆ ತುಂಗಭದ್ರಾ ಅಣೆಕಟ್ಟೆಯ 33 ಗೇಟ್ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಿರುವುದರಿಂದ ಎರಡನೇ ಬೆಳೆಗೆ ನೀರು ಹರಿಸದಿರುವ ನಿರ್ಧಾರವನ್ನು ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125 ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದಿಂದ ಕೈಗೊಳ್ಳಲಾಯಿತು.

ವಿಧಾನಸೌಧದಲ್ಲಿ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 125 ನೇ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಸಭೆಯ ನಿರ್ಧಾರಗಳ ಕುರಿತು ಮಾಹಿತಿ ನೀಡಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ,ಕೇಂದ್ರ‌ ಸರ್ಕಾರ‌ ಹಾಗೂ ತುಂಗಭದ್ರಾ ಜಲಾಶಯದ ಮಂಡಳಿಯ ನಿರ್ಧಾರದಂತೆ ಅಣೆಕಟ್ಟೆಯ 33 ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ನೀರು ಹರಿಸಲ್ಲ, ಡಿಸೆಂಬರ್ ಎರಡನೇ ವಾರದಿಂದ ಹೊಸ 33 ಗೇಟ್ ಅಳವಡಿಕೆ‌ ಕಾರ್ಯ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದೆ.‌ ಟೆಂಡರ್ ನಲ್ಲಿ‌ ಅಹರ್ತೆ ಪಡೆದಿರುವ ಗುಜರಾತ್ ಮೂಲದ ಕಂಪನಿಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇದರ ಜೊತೆಗೆ ಕೆಲ ಕಾಲುವೆಗಳ‌ ದುರಸ್ತಿ ಹಾಗೂ ಇನ್ನಿತರ‌‌ ಅಣೆಕಟ್ಟೆಯ ಸಂಪುರ್ಣ ಸಣ್ಣ ದುರಸ್ತಿಗಳನ್ನು ಇದೇ ಸಂದರ್ಭದಲ್ಲಿ‌ ಪೂರ್ಣಗೊಳಿಸಲಾಗುವುದು ಎಂದರು.

ಪ್ರಸ್ತುತ ಡ್ಯಾಂನಲ್ಲಿ‌‌‌ 75 ಟಿಎಂಸಿ‌ ನೀರು ಲಭ್ಯ:

ನಿಂತ‌ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ.10ರವರೆಗೆ ನೀರು ಹರಿಸಲಾಗುವುದು. ಅಲ್ಲದೆ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ‌ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರೆ  ಉಪಯೋಗಕ್ಕಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು ಎಂದು ಹೇಳಿದರು.

ಜಲಾಶಯದಲ್ಲಿನ‌ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ.ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಗೆ ಡಿ1ರಿಂದ ಜ.10ರವರೆಗೆ ಬೆಳೆದು ನಿಂತ ಬೆಳೆಗಳಿಗೆ 3000 ಕ್ಯೂಸೆಕ್ ನಂತೆ, ಎಡದಂಡೆ ವಿಜಯನಗರ ಕಾಲುವೆಗೆ ಜ.1ರಿಂದ ಮೇ 10ರವರೆಗೆ 150 ಕ್ಯೂಸೆಕ್ ನಂತೆ ವಿತರಣಾ ಕಾಲುವೆ 1ರಿಂದ 11ಎ ರವರೆಗೆ ನೀರು ಹರಿಸಲಾಗುವುದು ತಿಳಿಸಿದರು.

ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ಜ.10ರವರೆಗೆ 1300 ಕ್ಯೂಸೆಕ್ ನಂತೆ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ.1ರಿಂದ ಜ.10ರವರೆಗೆ 750 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಮೇ 31ರವರೆಗೆ ಸರಾಸರಿ 250 ಕ್ಯೂಸೆಕ್, ಇನ್ನು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 25 ಕ್ಯೂಸೆಕ್ ನಂತೆ ಅಥವಾ ನೀರಿನ‌ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ವಿವರಿಸಿದರು.

ಈ ಹಿಂದೆ ಜಲಾಶಯದ ಕ್ರಸ್ಟ್‌ ಗೇಟ್ ಮುರಿದ ಸಂದರ್ಭದಲ್ಲಿ, ಬೋರ್ಡ್ ನವರು ಅನುದಾನದ ಕೊಡದಿದ್ದರೂ ರಾಜ್ಯ ಸರ್ಕಾರವೇ ಸಂಪೂರ್ಣ ಹಣ ವ್ಯಯಿಸಿ ನೂತನ ಗೇಟ್ ಅಳವಡಿಕೆ ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ‌ ಜಲಸಂಪನ್ಮೂಲ‌‌ ಸಚಿವರಾದ ಡಿ.ಕೆ.ಶಿವಕುಮಾರ್‌ ಅವರು ಹೇಳಿದ್ದರು. ಆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್‌ ಹಾದಿಯಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.‌ ಇದೀಗ ಗೇಟ್ ಅಳವಡಿಕೆ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ನೀರಾವರಿ ಸಲಹಾ ಸಮಿತಿ‌ ಅಧ್ಯಕ್ಷ ಶಿವರಾಜ್ ತಂಗಡಗಿ ಬಿಜೆಪಿ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.


Share this with Friends

Related Post