Sun. Mar 15th, 2026

ಶಿಕಾರಿಪುರ, ಆನವಟ್ಟಿಯಲ್ಲಿ ನೂತನ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ: ಬಡವರ ಹಸಿವು ನೀಗಿಸುವುದೇ ಕಾಂಗ್ರೆಸ್ ಸರ್ಕಾರದ ಗುರಿ ಎಂದ ಮಧು ಬಂಗಾರಪ್ಪ

Share this with Friends

ಶಿಕಾರಿಪುರ: ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಮೂಲ ಮಂತ್ರವಾಗಿದ್ದು, ಬಡವರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಶಿಕಾರಿಪುರ ಹಾಗೂ ಆನವಟ್ಟಿಯಲ್ಲಿ ನೂತನ ಇಂದಿರಾ ಕ್ಯಾಂಟಿನ್‌ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶಿಕಾರಿಪುರ ಪಟ್ಟಣದ ತಾಲ್ಲೂಕು ಕಚೇರಿ ಆವರಣ ಹಾಗೂ ಆನವಟ್ಟಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್‌ಗಳನ್ನು ಬುಧವಾರ ಉದ್ಘಾಟಿಸಿ, ಮುಖಂಡರೊಂದಿಗೆ ಉಪಹಾರ ಸೇವಿಸಿದ ಬಳಿಕ ಅವರು ಮಾತನಾಡಿದರು.

ಬಡವರ ಆಸರೆ ಅನ್ನಭಾಗ್ಯ:

“2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದ ‘ಅನ್ನಭಾಗ್ಯ’ ಯೋಜನೆ ಇಂದಿಗೂ ಬಡವರ ಪಾಲಿಗೆ ದೊಡ್ಡ ಆಸರೆಯಾಗಿದೆ. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಿಂತಲೂ ಹಸಿದವರ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇಂದಿರಾ ಗಾಂಧಿಯವರ ಕಾಲದಿಂದಲೂ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವುದು ನಮ್ಮ ಪಕ್ಷದ ಗುರಿಯಾಗಿದೆ” ಎಂದು ಸಚಿವರು ಸ್ಮರಿಸಿದರು.

ಬಂಗಾರಪ್ಪನವರ ಜನಪರ ಹಾದಿ:

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಆಡಳಿತವನ್ನು ಸ್ಮರಿಸಿದ ಸಚಿವರು, “ನನ್ನ ತಂದೆಯವರು ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದ್ದು, ಭೂರಹಿತರಿಗೆ ಭೂಮಿ ಮಂಜೂರು ಮಾಡಿದ್ದು ಹಾಗೂ ಗ್ರಾಮೀಣ ಕೃಪಾಂಕದಂತಹ ಐತಿಹಾಸಿಕ ತೀರ್ಮಾನಗಳು ಅವರ ಬಡವರ ಪರ ಕಾಳಜಿಯನ್ನು ಎತ್ತಿ ತೋರಿಸುತ್ತವೆ. ಅವರ ಆಶಯದಂತೆಯೇ ನಾವು ಇಂದು ಜನಸೇವೆ ಮಾಡುತ್ತಿದ್ದೇವೆ” ಎಂದರು.

ಕೇವಲ ₹5ಕ್ಕೆ ತಿಂಡಿ, ₹10ಕ್ಕೆ ಊಟ:

ಇಂದಿರಾ ಕ್ಯಾಂಟಿನ್‌ನಲ್ಲಿ ಕೇವಲ ₹5ಕ್ಕೆ ಉಪಹಾರ ಹಾಗೂ ₹10ಕ್ಕೆ ಗುಣಮಟ್ಟದ ಊಟ ಸಿಗಲಿದೆ. ಪಟ್ಟಣದ ನಿರ್ಗತಿಕರು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಇದೇ ವೇಳೆ ಶಿಕಾರಿಪುರದಲ್ಲಿ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ವಿರೇಶ್, ತಹಶೀಲ್ದಾರ್ ವಾಣಿ, ಪುರಸಭೆ ಮುಖ್ಯಾಧಿಕಾರಿ ಭರತ್ ಹಾಗೂ ಮುಖಂಡರುಗಳಾದ ಗೋಣಿ ಮಾಲತೇಶ್, ದರ್ಶನ್ ಉಳ್ಳಿ, ರಾಘವೇಂದ್ರ ನಾಯ್ಕ್, ಪುಷ್ಪ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

 


Share this with Friends

Related Post