Fri. Mar 13th, 2026

ವಿಜಯಪುರ, ಕಲಬುರಗಿ ತಪ್ಪು ಮರುಕಳಿಸದಂತೆ ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಹೊಸ ತಾಣಗಳ ಹುಡುಕಾಟ: ಸಚಿವ ಎಂ.ಬಿ. ಪಾಟೀಲ್

Share this with Friends

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸಲಾಗಿರುವ ವಿಮಾನ ನಿಲ್ದಾಣಗಳು ಎದುರಿಸುತ್ತಿರುವ ಸವಾಲುಗಳನ್ನು ಮನಗಂಡಿರುವ ಸರ್ಕಾರ, ಬಳ್ಳಾರಿ ವಿಮಾನ ನಿಲ್ದಾಣ ಯೋಜನೆಯಲ್ಲಿ ಅಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, “ಈಗ ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣವು ಕಲಬುರಗಿ ರಸ್ತೆಯಲ್ಲಿದೆ. ಅದರ ಬದಲು ಆಲಮಟ್ಟಿ ಕಡೆಗೆ ನಿರ್ಮಿಸಿದ್ದರೆ ಬಾದಾಮಿ, ಐಹೊಳೆ, ಪಟ್ಟದಕಲ್ಲು ಮತ್ತು ಬಾಗಲಕೋಟೆ ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಗುತ್ತಿತ್ತು. ವಿಮಾನ ನಿಲ್ದಾಣಗಳು ಕೇವಲ ನಿರ್ಮಾಣವಾದರೆ ಸಾಲದು, ಅವು ನಿರಂತರವಾಗಿ ಕಾರ್ಯಾಚರಣೆಯಲ್ಲಿರುವುದು ಮುಖ್ಯ,” ಎಂದು ಅಭಿಪ್ರಾಯಪಟ್ಟರು.

ಹೊಸ ತಾಣಗಳ ಪರಿಶೀಲನೆ:

ಬಳ್ಳಾರಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಕೆಐಎಡಿಬಿ (KIADB) ವತಿಯಿಂದ 800 ಮತ್ತು 1,200 ಎಕರೆ ವಿಸ್ತೀರ್ಣದ ಎರಡು ಹೊಸ ತಾಣಗಳನ್ನು ಗುರುತಿಸಲಾಗಿದೆ. ಈ ಹಿಂದೆ ಗುರುತಿಸಲಾಗಿದ್ದ ಜಾಗದಲ್ಲಿ ಎಂಟು ಪಥಗಳ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಾಣ ಸೇರಿದಂತೆ ಭೂಸ್ವಾಧೀನಕ್ಕೆ ಅತಿಯಾದ ವೆಚ್ಚ ತಗಲುವ ಸಾಧ್ಯತೆ ಇರುವುದರಿಂದ, ಪ್ರಾಯೋಗಿಕವಾಗಿ ಹೊಸ ತಾಣಗಳೇ ಸೂಕ್ತ ಎನ್ನಲಾಗಿದೆ.

ಉಡಾನ್ ಯೋಜನೆ ವಿಸ್ತರಣೆಗೆ ಪ್ರಸ್ತಾವನೆ:

ಬೀದರ್ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಕೇಂದ್ರದ ‘ಉಡಾನ್’ ಯೋಜನೆಯನ್ನು 3ರಿಂದ 5 ವರ್ಷಗಳವರೆಗೆ ವಿಸ್ತರಿಸಬೇಕು. ನಂತರದ ಐದು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ನಿರ್ವಹಣೆ ಮಾಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಶೀಘ್ರದಲ್ಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಬಳ್ಳಾರಿ ವಿಮಾನ ನಿಲ್ದಾಣದ ಅಂತಿಮ ತಾಣವನ್ನು ನಿಗದಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


Share this with Friends

Related Post