ಬೆಂಗಳೂರು:ಜೆಡಿಎಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಗೆದ್ದಿದೆ. ಅದೇ ಬಿಹಾರ, ಮಹಾರಾಷ್ಟ್ರ, ದೆಹಲಿ ಮುಂತಾದ ರಾಜ್ಯಗಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ? ಮೊದಲು ರಾಷ್ಟ್ರೀಯ ಪಕ್ಷ ಎನ್ನುವ ಬೋರ್ಡ್ ತೆಗೆದುಹಾಕಿ ಬೇರೆ ಹಾಕಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹರಿಹಾಯ್ದರು.
ಬೆಂಗಳೂರು ಪ್ರೆಸ್ ಕ್ಲಬ್ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಆದರೆ ಒಳ್ಳೆಯದು ಎಂದು ಡಿಸಿಎಂ ಡಿಕೆಶಿ ಹೇಳಿಕೆ ನೀಡಿದ್ದಾರೆ ಆದರೆ ನಮ್ಮ ಪಕ್ಷದ ಕಥೆ ಇರಲಿ. ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಬಂದು ನಿಂತಿದೆ? ಎಷ್ಟು ಡಿಜಿಟ್’ಗೆ ಬಂದು ನಿಂತಿದೆ. ಬಿಹಾರ ಅಷ್ಟೇ ಅಲ್ಲ, ಇನ್ನೂ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಎಷ್ಟೆಷ್ಟು ಸ್ಥಾನ ಕಳಿಸಿದೆ? ಅದರ ಮತ ಗಳಿಕೆಯಷ್ಟು? ಅಲ್ಲಿ ಡಿಕೆಶಿ ಅವರು ತಮ್ಮ ಪಕ್ಷವನ್ನು ಯಾವ ಪಕ್ಷದಲ್ಲಿ ವಿಲೀನ ಮಾಡಿದ್ದಾರೆ ಎನ್ನುವುದನ್ನು ಮೊದಲು ಹೇಳಲಿ ಎಂದು ತಿರುಗೇಟು ನೀಡಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ಖಚಿತಪಡಿಸಿದ ನಿಖಿಲ್, ನಮ್ಮದು ರಾಜಕಾರಣದ ಹಿನ್ನೆಲೆಯ ಕುಟುಂಬ. ನಾನು ರಾಜಕಾರಣ ಮಾಡಬೇಕು ಎಂದೇ ಬಂದಿದ್ದೇನೆ. ಹಾಗೆಯೇ ವಿಧಾನಸೌಧಕ್ಕೆ ಪ್ರವೇಶ ಮಾಡಬೇಕು ಎಂದೇ ಬಂದಿದ್ದೇನೆ, ಯಾವ ಕ್ಷೇತ್ರದಿಂದ ಎಂಬುದನ್ನು ನಿಧಾನವಾಗಿ ತಿಳಿಸುವೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಹಜ ಮೈತ್ರಿ ಏರ್ಪಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟಿನ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಗೊತ್ತಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಯ ಬಲ ತಿಳಿಯಲಿದೆ ನಮ್ಮ ಹಾಗೂ ಬಿಜೆಪಿಯ ಮೈತ್ರಿ ಸ್ವಾಭಾವಿಕ, ಹಾಗೂ ಕಾರ್ಯಕರ್ತರ ಪ್ರೀತಿ ವಿಶ್ವಾಸದಿಂದ ಆಗಿರುವ ಮೈತ್ರಿ ಇದು, ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಿಗೆ ಬಲ ತುಂಬಬೇಕಿದೆ. ಅದಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಪಕ್ಷಗಳಿಗೂ ತಮ್ಮ ಸ್ವಂತ ಬಲ ಇರಲೇಬೇಕು. ಅದಕ್ಕೆ ಅವಕಾಶ ಕೊಡಬೇಕು. ರಾಷ್ಟ್ರ ಮಟ್ಟದ ಹಾಗೂ ಸ್ಥಳೀಯ ರಾಜಕಾರಣಕ್ಕೂ ವ್ಯತ್ಯಾಸ ಇರುತ್ತದೆ. ನಮ್ಮ ಮೈತ್ರಿ ನಿರ್ಧಾರಗಳನ್ನು ರಾಷ್ಟ್ರೀಯ ನಾಯಕರು ಅಂತಿಮವಾಗಿ ತೆಗೆದುಕೊಳ್ಳುತ್ತಾರೆ ಎಂದರು.
ಬಳ್ಳಾರಿ ಶಾಸಕನನ್ನು ಒದ್ದು ಒಳಕ್ಕೆ ಹಾಕಬೇಕಿತ್ತು:
ಸಣ್ಣ ಕಾರಣಕ್ಕೆ ಶುರುವಾದ ಬಳ್ಳಾರಿ ಗಲಾಟೆ ಗುಂಡು ಹಾರಿಸಿ ಕೊಲೆಯವರೆಗೂ ಹೋಗಿದೆ. ಆದರೆ, ಅಲ್ಲಿನ ಶಾಸಕ ಜನಾರ್ದನ ರೆಡ್ಡಿ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಗಮನಿಸಿದೆ. ಈ ಸರ್ಕಾರ ದ್ವೇಷ ಭಾಷಣ ತಡೆಗೆ ಮಸೂದೆ ಒಂದನ್ನು ಅಂಗೀಕಾರ ಮಾಡಿದೆ. ಇಲ್ಲಿ ದ್ವೇಷ ಭಾಷಣ ಅನ್ವಯ ಆಗಲ್ಲವಾ? ಈ ಸರ್ಕಾರಕ್ಕೆ ಬಳ್ಳಾರಿಯ ಶಾಸಕ ಮಾತನಾಡಿದ ಮಾತುಗಳು ಕೇಳಿಸಲಿಲ್ಲವೇ? ಇದು ಆ ಮಸೂದೆ ವ್ಯಾಪ್ತಿಗೆ ಬರೋದಿಲ್ವೇ? ಅವರಿಗೆ ರಕ್ಷಣೆ ಕೊಡುತ್ತೇವೆ ಎಂದು ಉಪ ಮುಖ್ಯಮಂತ್ರಿಗಳು ಹೇಗೆ ಹೇಳುತ್ತಾರೆ? ಇಲ್ಲಿ ನಮ್ಮ ಪಕ್ಷ ಜನಾರ್ದನ ರೆಡ್ಡಿ ಅವರ ನೆರವಿಗೆ ಧಾವಿಸಿದೆ, ಹಿಂದೆ ಅವರು ಕುಮಾರಸ್ವಾಮಿ ಅವರ ವಿರುದ್ಧ ಇದ್ದರು ಎಂಬುದಕ್ಕೂ ಇದಕ್ಕೂ ಸಂಬಂಧವಿಲ್ಲ. ರೆಡ್ಡಿ ಅವರಷ್ಟೇ ಅಲ್ಲ, ಅವರ ಜಾಗದಲ್ಲಿ ಯಾರೇ ಇದ್ದರೂ ನಮ್ಮ ಪಕ್ಷ ಸ್ಪಂದಿಸುತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೆ ಬೇರೆ ಕೆಲಸ ಇಲ್ಲವಷ್ಟೇ. ನಾಚಿಕೆ ಬಿಟ್ಟು ತಪ್ಪಿತಸ್ಥರನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಮೃತ ಕಾರ್ಯಕರ್ತನ ಮನೆಗೆ ಸಾಂತ್ವನ ಹೇಳಲು ಹೋದವರು ₹25 ಲಕ್ಷ ಕೊಡುವ ಅವಕಾಶ ಯಾವ ಕಾನೂನಿನಲ್ಲಿ ಇದೆಯೇ? ಇವರಿಗೆ ಕಾನೂನು ಅನ್ವಯ ಆಗುವುದಿಲ್ಲವೇ? ಗೃಹ ಸಚಿವರೇ ಈ ಎಲ್ಲಾ ಅಂಶಗಳ ಬಗ್ಗೆ ಏನಂತಿರಾ? ಇದಕ್ಕೆಲ್ಲಾ ಉಪ ಮುಖ್ಯಮಂತ್ರಿಗಳು ಉತ್ತರ ಕೊಡಬೇಕಲ್ವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹರಿಹಾಯ್ದರು.
ಬೆಂಗಳೂರಲ್ಲಿ ಪ್ರತಿ ಚದರ ಅಡಿಗೆ ಹಣ ಫಿಕ್ಸ್:
ಬೆಂಗಳೂರಲ್ಲಿ ಪ್ರತಿ ಚದರ ಅಡಿಗೆ ಹಣ ಫಿಕ್ಸ್ ಆಗಿದೆ. ನಮ್ಮ ಬೆಂಗಳೂರಲ್ಲಿ ಫುಟ್ ಪಾತ್ ಯಾವುದು ರಸ್ತೆ ಯಾವುದು ಎಂಬುದು ಗೊತ್ತಿಲ್ಲ. ಪ್ರತಿನಿತ್ಯ ರಸ್ತೆಯ ಮೂಲಕ ಕೆಲಸಕ್ಕೆ ಹೋಗಬೇಕಾದರೆ ಒಂದೂವರೆ, ಎರಡು ಗಂಟೆ ಸಮಯ ಬೇಕು. ಮೂಲಭೂತ ಸೌಕರ್ಯ ಕಳಪೆಯಾಗಿದೆ. ಕೇಳಿದರೆ ಕೇಳಿದವರ ಮೇಲೆಯೇ ವಾಗ್ದಾಳಿ ಮಾಡುತ್ತಾರೆ. ಯಾಕೆ ರಸ್ತೆ ಗುಂಡಿ ಮುಚ್ಚಿಲ್ಲ? ಇದೆಲ್ಲಾ ನೋಡಿಕೊಂಡೇ ಬೇರೆ ರಾಜ್ಯಗಳಿಗೆ ದೊಡ್ಡ ದೊಡ್ಡ ಕಂಪನಿಗಳು ಶಿಫ್ಟ್ ಆಗ್ತಿವೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಆವರು ಹೇಳಿದರು.
ಬ್ಲಾಕ್ ಬಕ್ ಸಂಸ್ಥೆ ಸಿಇಒ ಅಸಹಾಯಕತೆ ಹೇಳಿಕೊಂಡರು. ನಾವು ಬೇರೆ ರಾಜ್ಯಗಳನ್ನ ಆಯ್ಕೆ ಮಾಡ್ಕೋತೇವೆ. ಗೂಗಲ್ ಅವರು ವೈಜಾಗ್’ಗೆ ಹೋಗಿದ್ದು ಯಾಕೆ? ಅವರಿಗೆ ಬೇಸಿಕ್ ಇನ್ಫ್ರಾಸ್ಟ್ರಕ್ಚರ್ ಕೊಟ್ಟಿದ್ರೆ ಹೋಗ್ತಿದ್ರಾ?ನನಗೆ ಇನ್ನೂ ಸದನದ ಒಳಗೆ ?ಮಾತನಾಡುವ ಅವಕಾಶ ಸಿಕ್ಕಿಲ್ಲ. ಆದರೆ ಸದನದ ಹೊರಗಡೆ ಮಾತನಾಡಲಿಕ್ಕೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿಖಿಲ್ ಗುಡುಗಿದರು.

