ಬೆಂಗಳೂರು: ಕಳೆದ ಐದು ದಶಕಗಳಲ್ಲಿ ದೇಶದ ಮಾನಸಿಕ ಆರೋಗ್ಯ ಹಾಗೂ ನರರೋಗಗಳ ಕ್ಷೇತ್ರದಲ್ಲಿ ನಿಮ್ಹಾನ್ಸ್ ಅಸಾಧಾರಣ ಕೊಡುಗೆ ನೀಡುತ್ತಾ ದೇಶದ ಪ್ರಮುಖ ಸಂಸ್ಥೆಯಾಗಿ ಛಾಪು ಮೂಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಆಯೋಜಿಸಿದ್ದ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಮಹತ್ವವನ್ನು ಹೊಂದಿರುವ ಈ ಸಂಸ್ಥೆಯು ತನ್ನ ಐದು ದಶಕದ ಪಯಣದಲ್ಲಿ ಆರೈಕೆ, ಸಂಶೋಧನೆ ಮತ್ತು ಶಿಕ್ಷಣ ವಲಯದಲ್ಲಿ ವಿಶ್ವದ ಗಮನ ಸೆಳೆದಿದೆ. ಮಾನಸಿಕ ಆರೋಗ್ಯ ಕುರಿತಾದ ನೀತಿ ನಿರೂಪಣೆಯಲ್ಲಿ ನಿಮ್ಹಾನ್ಸ್ ಕೊಡುಗೆಯನ್ನು ಜಾಗತಿಕವಾಗಿ ಗುರುತಿಸಲಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪಾರ್ಶ್ವವಾಯು, ತೀವ್ರತರ ಮೆದುಳು ಕಾಯಿಲೆಗಳು ಮತ್ತು ನರರೋಗ ಚಿಕಿತ್ಸೆಯಲ್ಲಿ ಅತ್ಯುತ್ತಮ ಗುಣಮಟ್ಟವನ್ನು ಸಾಧಿಸುವ ಮೂಲಕ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಿಮ್ಹಾನ್ಸ್ ಕೊಡುಗೆ ಶ್ಲಾಘನೀಯ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಾದ್ಯಂತ ಮಾನಸಿಕ ಆರೋಗ್ಯ ಸೇವೆಯನ್ನು ಕಲ್ಪಿಸಲು ಸರ್ಕಾರ ನಿಮ್ಹಾನ್ಸ್ನೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ,ನಮ್ಮ ಸರ್ಕಾರ ಮಾನಸಿಕ ಆರೋಗ್ಯ ಸೇವೆಯನ್ನು ಒದಗಿಸಲು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟಗಳಲ್ಲಿ ಆತ್ಮಹತ್ಯೆ ತಡೆ, ದುಶ್ಚಟ ಹೊಂದಿದವರ ಪುನರ್ವಸತಿ ಮತ್ತು ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ,
ಟೆಲಿ ಮಾನಸ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು, ರಾಜ್ಯದಲ್ಲಿ ಮಾನಸಿಕ ಆರೋಗ್ಯದ ಬೆಂಬಲ ಅಗತ್ಯವಿರುವ ಸುಮಾರು 17 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ.
ರಾಜ್ಯ ಸರ್ಕಾರ ನೀತಿ ಆಯೋಗ, ನಿಮ್ಹಾನ್ಸ್ ಸಹಯೋಗದಲ್ಲಿ ಆರಂಭಿಸಿರುವ ಕರ್ನಾಟಕ ಬ್ರೈನ್ ಹೆಲ್ತ್ ಇನೀಷಿಯೇಟಿವ್, ನರರೋಗ ಆರೈಕೆಯಲ್ಲಿ ತಜ್ಞರ ಸೇವೆಯನ್ನು ಜಿಲ್ಲಾಮಟ್ಟದಲ್ಲಿಯೂ ಲಭ್ಯವಾಗಿಸಿದೆ. ತೀವ್ರತರ ಪಾರ್ಶ್ವವಾಯು ಮತ್ತು ನರರೋಗ ಆಘಾತ ಆರೈಕೆಯಲ್ಲಿ ತರಬೇತಿ ಮತ್ತು ನಾವೀನ್ಯತಾ ಮಾದರಿಗಳನ್ನು ಈ ಯೋಜನೆ ಸಾಧ್ಯವಾಗಿಸಿದೆ.
ಈ ಎಲ್ಲ ಸಾಧನೆಗೆ ಕಾರಣರಾಗಿರುವ ನಿಮ್ಹಾನ್ಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ನನ್ನ ಅಭಿನಂದನೆಗಳು ಎಂದು ಸಿದ್ದರಾಮಯ್ಯ ತಿಳಿಸಿದರು.