Sat. Mar 7th, 2026

ಉತ್ತರದಲ್ಲಿ ನಿತೀಶ್ ಕುಮಾರ್,ದಕ್ಷಿಣದಲ್ಲಿ ಕುಮಾರಸ್ವಾಮಿ: ದೇವೇಗೌಡ

Share this with Friends

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಮಗೆ ಸಂಪೂರ್ಣ ವಿಶ್ವಾಸವಿದ್ದು ಯಾವುದೇ ಕಾರಣಕ್ಕೂ ಎನ್ಡಿಎ ಜತೆಗಿನ ಮೈತ್ರಿ ಕಡಿದುಕೊಳ್ಳಲ್ಲ,ಉತ್ತರದಲ್ಲಿ ನಿತೀಶ್,ದಕ್ಷಿಣದಲ್ಲಿ ಕುಮಾರಸ್ವಾಮಿ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಕಟಿಸಿದರು.

ಜೆಡಿಎಸ್ ಬೆಳ್ಳಿಹಬ್ಬವನ್ನು ಉದ್ಘಾಟಿಸಿ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ನಾವು ಎನ್ಡಿಎ ಜತೆ ಇದ್ದೇವೆ. ಮೋದಿ ಅವರ ನೇತೃತ್ವದಲ್ಲಿ ವಿಶ್ವಾಸ ಇಟ್ಟಿದ್ದೇವೆ. ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ಇದನ್ನು ನಮ್ಮ ಕಾರ್ಯಕರ್ತರು, ಮುಖಂಡರು ಯಾರು ಮರೆಯಬಾರದು.ಉತ್ತರದಲ್ಲಿ ಜೆಡಿಯು, ದಕ್ಷಿಣದಲ್ಲಿ ಜೆಡಿಎಸ್ ಎಂದು ಘೋಷಣೆ ಮೊಳಗಿಸಿದ ದೇವೇಗೌಡರು; ಅಲ್ಲಿ ನಿತೀಶ್ ಕುಮಾರ್, ಇಲ್ಲಿ ಕುಮಾರಸ್ವಾಮಿ ಎಂದು ಒತ್ತಿ ಹೇಳಿದರು.

ನಿತೀಶ್ ಅವರು ಮೂವತ್ತು ವರ್ಷದಿಂದಲೂ ರಾಜಕಾರಣದಲ್ಲಿ ಇದ್ದಾರೆ. ಹತ್ತನೇ ಬಾರಿಗೆ ಪ್ರಮಾಣ ಮಾಡಿದ್ದಾರೆ. ಅವರು ಬಹಳ ಸೂಕ್ಷ್ಮವಾಗಿ ರಾಜಕಾರಣ ಮಾಡಿಕೊಂಡಿದ್ದಾರೆ. ಇದನ್ನು ನಾವು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ತುರ್ತು ಪರಿಸ್ಥಿತಿ ಹೇರಿದಾಗ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಿದ ಜಯಪ್ರಕಾಶ ನಾರಾಯಣ ಅವರ ಜತೆಯಲ್ಲಿ ನಾವು, ಅವತ್ತಿನ ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕು ಎಂದು ಗುಡುಗಿದರು.

ನಂತರ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ,ಮಾಜಿ ಪ್ರಧಾನಿಗಳಾದ ದೇವೇಗೌಡರು ತಮ್ಮ ಇಡೀ ಬದುಕನ್ನು ಜನರಿಗೆ ಮೀಸಲಿಟ್ಟರು. ಅವರು ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋದವರಲ್ಲಾ. ಈ ರಾಜ್ಯವನ್ನು ದೀರ್ಘ ಕಾಲ ಆಳಿದ ದೇವರಾಜು ಅರಸು ಅವರೇ ಬಂದು ನನ್ನ ನಮ್ಮ ಜೊತೆ ಕೈ ಜೋಡಿಸು ಎಂದು ಹೇಳಿದರೂ ದೇವೇಗೌಡರು ಕೇಳಲಿಲ್ಲ. ಒಂದು ಆದರ್ಶ, ಮೌಲ್ಯ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಅಂತಹವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಿದರು. ದೇವೇಗೌಡರು ಜ್ಯೋತಿಷ್ಯರನ್ನ ನಂಬುತ್ತಾರೆ ಎಂದು ಆ ಜ್ಯೋತಿಷಿಗಳನ್ನು ಟ್ರ್ಯಾಪ್ ಮಾಡಿ ವಂಚಿಸಿದರು. ಅಲ್ಲದೆ, ಮೈಸೂರಿನಲ್ಲಿ ದೇವೇಗೌಡರು 500 ನಿವೇಶನಗಳನ್ನು ಖರೀದಿ ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರ ವಿರುದ್ದ ಸಿಐಡಿ, ಲೋಕಾಯುಕ್ತ ಸೇರಿ ಅನೇಕ ತನಿಖೆಗಳನ್ನು ನಡೆಸಿದರು. ಕೊನೆಗೆ ಸತ್ಯಕ್ಕೆ ಜಯವಾಯಿತು. ದೇವೇಗೌಡರು ಏನೆಂಬುದು ರಾಜ್ಯದ ಜನತೆಗೆ ತಿಳಿಯಿತು.

ಜನರು ಹಾಗೂ ಕಾರ್ಯಕರ್ತರಿಂದ ಜೆಡಿಎಸ್ ಉಳಿದಿದೆ. ಜನತೆಗೆ ನಮ್ಮ ಕೈಲಾದಷ್ಟು ಒಳ್ಳೆಯದನ್ನು ಮಾಡಿದ್ದೇವೆ. ನಾವೇನು ಅನ್ಯಾಯ ಮಾಡಿದ್ದೇವೆ ಈ ರಾಜ್ಯಕ್ಕೆ? ದೇವೇಗೌಡರು ಏನು ಅನ್ಯಾಯ ಮಾಡಿದ್ದಾರೆ? ನಮಗೆ ಯಾಕೆ ಪೂರ್ಣ ಪ್ರಮಾಣದ ಆಶೀರ್ವಾದ ಸಿಕ್ಕಿಲ್ಲ? ಯಾವ ಸಮುದಾಯಕ್ಕೂ ನಮ್ಮ ಪಕ್ಷದಿಂದ ಅನ್ಯಾಯ ಆಗಿಲ್ಲ. ಬೇರೆ ಬೇರೆ ರಾಜ್ಯಗಳ ಜನರು ದೇವೇಗೌಡರನ್ನು ನೆನಪು ಮಾಡಿಕೊಳ್ಳುತ್ತಾರೆ ಆದರೆ ನಮ್ಮ ರಾಜ್ಯದ ಜನತೆಗೆ ಏಕೆ ಅಂತಹ ಭಾವನೆ ಇಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದರು.

ನಾನು ಎರಡು ಬಾರಿ ಸಿಎಂ ಆಗಿದ್ದರೂ ಸಂಪೂರ್ಣ ಬಹುಮತದ ಸರ್ಕಾರ ಸಿಗಲಿಲ್ಲ. ಬಿಜೆಪಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದೆ. 20 ತಿಂಗಳ ಅಧಿಕಾರವದಿಯಲ್ಲಿ ನೂರಾರು ಕಾಲೇಜು, ಆಸ್ಪತ್ರೆ ಕಟ್ಟಿದ್ದೇವೆ. ಲಾಟರಿ, ಸಾರಾಯಿ ನಿಷೇಧ ಮಾಡಿದಾಗ ಯಾವ ರೀತಿ ನನ್ನ ಮೇಲೆ ಎಷ್ಟೇ ಒತ್ತಡ ಹಾಕಿದರೂ ರಾಜ್ಯದ ಹೆಣ್ಣು ಮಕ್ಕಳ ಒಳ್ಳೆಯದಕ್ಕಾಗಿ ನಾನು ಅವುಗಳನ್ನು ಬ್ಯಾನ್ ಮಾಡಿದೆ. ಆ ಕಾರಣಕ್ಕೆ ಜನರು ನನಗೆ ಶಿಕ್ಷೆ ವಿಧಿಸುತ್ತಿದ್ದಾರೆಯೇ?25ರಿಂದ 26 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 500 ರಿಂದ 1000  ಕೋಟಿ ಅನುದಾನ ಕೊಟ್ಟೆ. ಇಷ್ಟಾದರೂ ನಮಗೆ ಜನರು ಪೂರ್ಣ ಬಹುಮತ ನೀಡುತ್ತಿಲ್ಲ ಯಾಕೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಜನರ ಋಣ ತೀರಿಸುವೆ:

ಕೇಂದ್ರದಲ್ಲಿ ನರೇಂದ್ರ ಮೋದಿಯವರು ನನಗೆ ಅವಕಾಶ ಕೊಟ್ಟಿದ್ದಾರೆ. ಆಂದ್ರಪ್ರದೇಶದ ವೈಜಾಕ್ ನಲ್ಲಿ ಸ್ಟೀಲ್ ಫ್ಯಾಕ್ಟರಿ ಪುನರಾರಂಭ ಮಾಡಿದ್ದೇನೆ. ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಸ್ಟೀಲ್ ಫ್ಯಾಕ್ಟರಿಯನ್ನ ಪುನಶ್ಚೇತನ ಮಾಡುವೆ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.


Share this with Friends

Related Post