Fri. Mar 6th, 2026

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಜತೆ ಮೈತ್ರಿ ಇಲ್ಲ,ಜೆಡಿಎಸ್ ನಿಂದ ಪ್ರತ್ಯೇಕ ಸ್ಪರ್ಧೆ: ದೇವೇಗೌಡ

Share this with Friends

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭಾದಿತ, ನಾವು ಎನ್.ಡಿ.ಎ ಭಾಗವೇ ಆಗಿದ್ದೇವೆ ಆದರೆ ಅದರ ವ್ಯಾಪ್ತಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅನ್ವಯವಾಗುವುದಿಲ್ಲ ಹಾಗಾಗಜ ನಾವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರವಾಗಿಯೇ ಪಕ್ಷದ ಚಿನ್ಹೆಯಡಿ ಎಲ್ಲ ಸ್ಥಾನಗಳಿಗೂ ಸ್ಪರ್ಧೆ ಮಾಡಲಿದ್ದೇವೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಮೈತ್ರಿ ಆಗಿತ್ತು ಅದು ವಿಧಾನಸಭೆ ಚುನಾವಣೆಯಲ್ಲಿ ಕೂಡ ಮುಂದುವರಿಯುತ್ತದೆ.ಲೋಕಸಭೆ, ವಿಧಾನಸಭೆಗಷ್ಟೇ ಬಿಜೆಪಿ, ಜೆಡಿಎಸ್ ಮೈತ್ರಿ ಆಗಿದೆ ಹಾಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದರು.

ಪಕ್ಷ ಕಟ್ಟುವ ದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹಳ ಮುಖ್ಯ. ಸ್ಥಳೀಯ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲು ಆಗುತ್ತದೆಯೇ?ಜೆಡಿಎಸ್ ಮತ್ತು ಬಿಜೆಪಿ ನಡುವೆ ಸಂಬಂಧ ಚೆನ್ನಾಗಿದೆ. ನರೇಂದ್ರ ಮೋದಿ ಅವರು ಹಾಗೂ ಅಮಿತ್ ಶಾ ಅವರೊಂದಿಗೆ ನಮ್ಮ ಬಾಂಧವ್ಯ ಉತ್ತಮವಾಗಿದೆ. ನಮ್ಮ ಶಕ್ತಿ ಎಲ್ಲೆಲ್ಲಿ ಇದೆಯೋ ಅಲೆಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ನಗರ ಪಾಲಿಕೆಗಳಲ್ಲಿ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ ಎಂದರು.

ಪಕ್ಷದ ಸಂಘಟನೆಯ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಜತೆ ಮಾತನಾಡಿದ್ದೇನೆ. ಹಾಸನದಲ್ಲಿ ಜನವರಿ 23ರಂದು, ಬೆಂಗಳೂರಿನಲ್ಲಿ ಜನವರಿ 18ರಂದು ಸಭೆಗಳನ್ನು ಮಾಡುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ. ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಾವು ಎನ್‌ಡಿಎ ಮೈತ್ರಿಕೂಟದಲ್ಲಿಯೇ ಇರುತ್ತೇವೆ. ಹಾಗೆಯೇ; ವಿಧಾನ ಪರಿಷತ್ 4 ಸ್ಥಾನಗಳ ಚುನಾವಣೆಯಲ್ಲಿ ಒಂದು ಸ್ಥಾನ ಜೆಡಿಎಸ್‌ಗೆ ಮತ್ತು 3 ಸ್ಥಾನ ಬಿಜೆಪಿಗೆ ಹಂಚಿಕೆಯಾಗುವ  ಬಗ್ಗೆ ಪ್ರಾಥಮಿಕ ಮಟ್ಟದಲ್ಲಿ ಚರ್ಚೆ ಆಗಿದೆ ಎಂದು ಮಾಜಿ ಪ್ರಧಾನಿಗಳು ಉತ್ತರಿಸಿದರು.

ಬೆಂಗಳೂರು ನಗರದಲ್ಲಿಯೂ ಪಕ್ಷ ಸಂಘಟನೆ ಮಾಡುವ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಸುಮ್ಮನೆ ಕೂರುವುದು ನನಗೆ ಇಷ್ಟವಿಲ್ಲ. ಹೀಗಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ನಾನು ತೊಡಗಿದ್ದೇನೆ. ಎಲ್ಲಿಗೆ ಕರೆದರೂ ಹೋಗುತ್ತೇನೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.


Share this with Friends

Related Post