Fri. Mar 6th, 2026

ಬಸ್ ಪ್ರಯಾಣ ದರ ಏರಿಕೆ ಬಿಸಿ ಸದ್ಯಕ್ಕಿಲ್ಲ..!

Ramalinga Reddy
Share this with Friends

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದ ‘ಬಸ್ ದರ ಏರಿಕೆ’ ವಿಷಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟದ ನಡುವೆಯೂ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕದಿರಲು ಸರ್ಕಾರ ನಿರ್ಧರಿಸಿದೆ.

ಡೀಸೆಲ್ ಬೆಲೆ ಏರಿಕೆ ಹಾಗೂ ನಿರ್ವಹಣಾ ವೆಚ್ಚದ ನೆಪವೊಡ್ಡಿ ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ದರಗಳಲ್ಲಿ ಶೇ. 15 ರಿಂದ 20 ರಷ್ಟು ಹೆಚ್ಚಳವಾಗಲಿದೆ ಎಂಬ ಸುದ್ದಿಗಳು ದಟ್ಟವಾಗಿದ್ದವು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, “ಸಾರಿಗೆ ನಿಗಮಗಳು ಲಾಭದ ಉದ್ದೇಶಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಸೇವೆಯ ಮೇಲೆ ಗಮನ ಹರಿಸಿವೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ” ಎಂದು ತಿಳಿಸಿದ್ದಾರೆ.

ದರ ಏರಿಕೆ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಬೇಕಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹಾಕಬಾರದು ಎಂಬುದು ಸರ್ಕಾರದ ನಿಲುವು ಎಂದು ಎನ್ನಲಾಗಿದೆ.

ಶಕ್ತಿ ಯೋಜನೆಯ ನಡುವೆಯೂ ಸ್ಥಿರತೆ:

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ‘ಶಕ್ತಿ’ ಯೋಜನೆಯಿಂದಾಗಿ ಪುರುಷ ಪ್ರಯಾಣಿಕರಿಗೆ ದರ ಏರಿಕೆಯಾಗಬಹುದು ಎಂಬ ಆತಂಕವಿತ್ತು. ಆದರೆ ಸಚಿವರ ಈ ಭರವಸೆಯು ರಾಜ್ಯದ ಲಕ್ಷಾಂತರ ಪುರುಷ ಪ್ರಯಾಣಿಕರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ದೊಡ್ಡ ಸಮಾಧಾನ ತಂದಿದೆ.

ಸಂಸ್ಥೆಗಳ ಉಳಿವಿಗೆ ಪರ್ಯಾಯ ಹಾದಿ:

ದರ ಏರಿಸದೆ ಸಂಸ್ಥೆಯನ್ನು ಹೇಗೆ ನಡೆಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿರುವ ಇಲಾಖೆ, ಸೋರಿಕೆ ತಡೆಗಟ್ಟುವುದು, ಜಾಹೀರಾತು ಮೂಲದ ಆದಾಯ ಹೆಚ್ಚಿಸುವುದು ಮತ್ತು ಹೊಸ ಎಲೆಕ್ಟ್ರಿಕ್ ಬಸ್‌ಗಳ ಮೂಲಕ ಇಂಧನ ವೆಚ್ಚ ತಗ್ಗಿಸುವ ಯೋಜನೆಯನ್ನು ಹಾಕಿಕೊಂಡಿದೆ.


Share this with Friends

Related Post