ಬಳ್ಳಾರಿ: ಮಾಜಿ ಸಚಿವರಾದ ಶ್ರೀ ರಾಮುಲು ವೇಗ, ಜನಾರ್ದನ ರೆಡ್ಡಿ ಶಕ್ತಿ, ಇವರಿಬ್ಬರೂ ಬೆಂಕಿ ಬಿರುಗಾಳಿ ಇದ್ದ ಹಾಗೆ, ಜನಾರ್ದನ ರೆಡ್ಡಿ, ರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಪೋಸ್ಟರ್ ಹಾಕುವ ವಿಚಾರದಲ್ಲಿ ನಡೆದ ಗಲಾಟೆ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಬಳ್ಳಾರಿಯಲ್ಲಿ ಈ ಘಟನೆ ಆಗಲು ಎರಡು ಕಾರಣ ಜನಾರ್ದನ ರೆಡ್ಡಿ ಕೋರ್ಟಿನ ಆದೇಶದ ಪ್ರಕಾರ ಬಳ್ಳಾರಿಗೆ ಬಂದಿದ್ದರಿಂದ ತಮಗೆ ಉಳಿಗಾಲವಿಲ್ಲ ಎನ್ನುವುದು ಹಾಗು ಜನಾರ್ದರೆಡ್ಡಿ ಮತ್ತು ಅವರ ಆತ್ಮೀಯ ಸ್ನೇಹಿತ ರಾಮುಲು ಒಂದಾಗಿದ್ದಾರೆ ಎಂದರೆ ಬಳ್ಳಾರಿಯ ಕಾಂಗ್ರೆಸ್ ನಾಯಕರ ಕುರ್ಚಿ ಅಲುಗಾಡುತ್ತಿದೆ ಎನ್ನುವುದು ಎರಡನೆಯದು ಆದರೂಮಾಜಿ ಸಚಿವರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರ ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆಗೆ ಬಿಜೆಪಿ ಯಾವಾಗಲೂ ಇರುತ್ತದೆ ಎಂದರು.
ಜನಾರ್ದನ ರೆಡ್ಡಿ ಅವರು ಮನೆಯಲ್ಲಿ ಇದ್ದಾರೆ ಅಂತ ಅವರ ಮನೆ ಮೇಲೆ ಗುಂಡು ಹಾರಿಸಿದ್ದಾರೆ. ಭರತ ರೆಡ್ಡಿಗೆ ಶಾಪ ಖಂಡಿತವಾಗಲೂ ತಟ್ಟುತ್ತದೆ. ಜನಾರ್ದನ ರೆಡ್ಡಿ ಅವರನ್ನು ರಾಜಕೀಯವಾಗಿ ಯಾವ ರೀತಿಯಲ್ಲೂ ಮುಗಿಸಲು ಸಾಧ್ಯವಿಲ್ಲ. ಅವರು ಬಳ್ಳಾರಿಗೆ ಮಾಡಿದ ಸಹಾಯ ಜನರಿಗೆ ಮಾಡಿದ ಕೆಲಸ ಬಹಳಷ್ಟಿದೆ. 2008 ರ ನಂತರ ಬಳ್ಳಾರಿಯ ರಸ್ತೆ ಅಭಿವೃದ್ದಿ, ಕುಡಿಯುವ ನಿರು ಜನರಿಗೆ ಸಾಕಷ್ಟು ಅನುಕೂಲ ಆಗಿದೆ ಎಂದರು.
ಈ ರೀತಿಯ ಘಟನೆ ಎಲ್ಲ ಕಡೆ ನಡೆಯುತ್ತಿದೆ. ಹುಬ್ಬಳ್ಳಿಯಲ್ಲಿ ಹೆಣ್ಣು ಮಗಳ ಬಟ್ಟೆಯನ್ನು ಪೊಲೀಸರೆ ಬಿಚ್ಚುತ್ತಾರೆ. ಕೊಲಾರದಲ್ಲಿ ಮಹಿಳಾ ಅಧಿಕಾರಿಯನ್ನು ಸುಟ್ಟು ಹಾಕುತ್ತೇನೆ ಎನ್ನುತ್ತಾರೆ. ಭದ್ರಾವತಿಯಲ್ಲಿ ಅಧಿಕಾರಿಗೆ ಶಾಸಕರ ಪುತ್ರ ಧಮ್ಕಿ ಹಾಕುತ್ತಾನೆ. ಅದೇ ರೀತಿ ಮಾಗಡಿಯಲ್ಲಿ ತಹಸಿಲ್ದಾರಗೆ ಚಪ್ಪಲೀಲಿ ಹೊಡಿತಿನಿ ಅಂತಾರೆ. ಸುಟ್ಟು ಹಾಕುವದು ಚಪ್ಪಲಿಯಲ್ಲಿ ಹೊಡೆಸುವುದು ಕಾಂಗ್ರೆಸ್ ಸಂಸ್ಕೃತಿ. ಇಲ್ಲಿ ಯಾರಿಗೂ ನೆಮ್ಮದಿ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ನವರಿಂದ ಗಣಿ ಲೂಟಿ:
ಈ ಬಳ್ಳಾರಿ ಗಣಿ ಲೂಟಿ ಮಾಡಿದ್ದು ಕಾಂಗ್ರೆಸ್ ನವರು, ಅವರಿಗೆ ಸುಳ್ಳು ಕೇಸು ಹಾಕಿಸುವ ಪ್ರವೃತ್ತಿ ಇದೆ. ಗಣಿ ಅಕ್ರಮಕ್ಕೂ ಅವರಿಗೂ ಸಂಬಂಧ ಇರಲಿಲ್ಲ ಆಗಲು ಅವರ ಮೇಲೆ ಕೇಸ್ ಹಾಕಿಸಿದರು. ಕೋರ್ಟ್ ಅದನ್ನು ಡಿಸ್ ಮಿಸ್ ಮಾಡಿದೆ. ಸತ್ಯಕ್ಕೆ ಯಾವಾಗಲೂ ಜಯ ಇದೆ. ಮೃತ ರಾಜಶೇಖರ ಸಾವಿಗೆ ನ್ಯಾಯ ಕೊಡಿಸಲು ಬಿಜೆಪಿ ಹೋರಾಟ ಮಾಡುತ್ತದೆ. ಅಲ್ಲಿವರೆಗೂ ಬಿಜೆಪಿ ವಿಶ್ರಮಿಸುವುದಿಲ್ಲ. ಕಾಂಗ್ರೆಸ್ ಸರ್ಕಾರ ತೆಗೆಯುವವರೆಗೂ ನಾವು ಹಳ್ಳಿಹಳ್ಳಿಗೆ ಹೋಗಿ ಭ್ರಷ್ಟ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ. ಬಳ್ಳಾರಿ ಅಭಿವೃದ್ಧಿ ಮಾಡಲು ಜನಾರ್ದನ ರೆಡ್ಡಿ ರಾಮುಲು ಅವರ ಹಿಂದೆ ನಾವಿದ್ದೇವೆ ಎಂದು ಸಾರಲು ನಾವು ಬಂದಿದ್ದೇವೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಬಂದಿರುವುದಕ್ಕೆ ಕೋಟಿ ಕೋಟಿ ಧನ್ಯವಾದಗಳು ಎಂದು ಹೇಳಿದರು.

