Thu. Mar 5th, 2026

ರಾಜ್ಯಕ್ಕೆ ಹಿಂಗಾರು ಪ್ರವೇಶ: ದಕ್ಷಿಣ ಕರ್ನಾಟಕಕ್ಕೆ ಅಧಿಕ ಮಳೆ

Share this with Friends

ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಾರು(ನೈಋತ್ಯ ಮಾನ್ಸೂನ್) ಮಳೆ ಗುರುವಾರ ಕೊನೆಗೊಂಡಿದೆ. ದಕ್ಷಿಣ ಕರ್ನಾಟಕ, ತಮಿಳುನಾಡಿನ ಕರಾವಳಿ, ಪುದುಚೇರಿ, ಕಾರೈಕಲ್, ಕರಾವಳಿ ಆಂಧ್ರಪ್ರದೇಶ ಹಾಗೂ ರಾಯಲಸೀಮಾ ಭಾಗಕ್ಕೆ ಹಿಂಗಾರು (ಈಶಾನ್ಯ ಮಾನ್ಸೂನ್) ಪ್ರವೇಶಿಸಿದೆ.

ದೇಶಾದ್ಯಂತ ಏಕಕಾಲದಲ್ಲಿ ಮುಂಗಾರು ಹಿಂತೆಗೆದುಕೊಂಡಿರುವುದು ಮತ್ತು ಹಿಂಗಾರು ಆರಂಭವಾಗಿರುವುದು ಗಮನಾರ್ಹ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.

ಈಶಾನ್ಯ ಮಾನ್ಸೂನ್ ಪ್ರವೇಶ ಹಿನ್ನೆಲೆ, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಬರುವ ದಿನಗಳಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತದಿಂದ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ.

ದಕ್ಷಿಣ ರಾಜ್ಯಕ್ಕೆ ವರ: ಅ.1ರಿಂದ ಡಿಸೆಂಬರ್ 31ರವರೆಗಿನ ಅವಧಿಯನ್ನು ಈಶಾನ್ಯ ಮಾರುತವೆಂದು ಕರೆಯಲಾಗುತ್ತದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಈಶಾನ್ಯ ಮಾರುತ, ಪ್ರಧಾನ ಮಳೆಗಾಲವಾಗಿದೆ. ಕರಾವಳಿ ಆಂಧ್ರಪ್ರದೇಶ, ರಾಯಲಸೀಮಾ, ತಮಿಳುನಾಡು, ಪಾಂಡಿಚೇರಿಗೆ ಉತ್ತಮ ಮಳೆ ತರಲಿದೆ. ತಮಿಳುನಾಡಿಗೆ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.48 ಮಳೆ, ಈಶಾನ್ಯ ಮಾರುತದಿಂದ ಬೀಳಲಿದೆ. ಬೆಂಗಳೂರು, ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ.30-ಶೇ.40 ಈಶಾನ್ಯ ಮಾರುತದಿಂದ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಒಟ್ಟು ವಾರ್ಷಿಕ ಮಳೆ 1,019 ಮಿಮೀ ಇದ್ದು, ಇದರಲ್ಲಿ 210 ಮಿಮೀ ಮಳೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಮಳೆಯಾಗುತ್ತದೆ. ಅದರಲ್ಲಿ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಅಂದರೆ ಅಂದಾಜು 171 ಮಿಮೀ ಮಳೆ ಬೀಳಲಿದೆ.

ಈಶಾನ್ಯ ಮಾನ್ಸೂನ್‌ನಲ್ಲೇ ಸೈಕ್ಲೋನ್ ಅಧಿಕ: 
ರಾಜ್ಯದಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಅಧಿಕ ಸೈಕ್ಲೋನ್ ಉಂಟಾಗಲಿದೆ. ಇದರ
ಪರಿಣಾಮದಿಂದ ರೈತರಿಗೆ ಕಂಟಕವಾಗಲಿದೆ. ಜೂನ್‌ನಲ್ಲಿ ಆರಂಭವಾಗುವ ಮುಂಗಾರು ಮಳೆಯಿಂದಾಗಿ ಬಿತ್ತನೆ ಬೀಜ ಬಿತ್ತುವ ರೈತರು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸಲಿಗೆ ಬರುವ ಬೆಳಗಳನ್ನು ಕೂಯ್ಲುಗೆ ಸಿದ್ಧತೆ ನಡೆಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಂಭವಿಸುವ ಸೈಕ್ಲೋನ್‌ನಿಂದ ಶೇ.70 ರಾಗಿ, ಜೋಳ, ಭತ್ತ, ಈರಳ್ಳಿ, ಕಾಫಿ, ಅಡಕೆ, ಕಾಳುಮೆಣಸು, ಬಾಳೆ, ಪಪ್ಪಾಯ, ಆಲೂಗಡ್ಡೆ, ಮೆಣಸಿನಕಾಯಿ, ಹೆಸರು, ಗೋವಿನ ಜೋಳ, ಸೋಯಾಬೀನ್, ತೊಗರಿ, ಅಲಸಂಧೆ, ಶೇಂಗಾ ಹಾಗೂ ಹತ್ತಿ ಸೇರಿ ವಿವಿಧ ಬೆಳೆಗಳು ಸೈಕ್ಲೋನ್‌ನಿಂದಲೇ ಹಾಳಾಗಲಿದೆ.

ವಾರಪೂರ್ತಿ ಮಳೆ:
ಈಶಾನ್ಯ ಮಾನ್ಸೂನ್ ಪ್ರಭಾವದಿಂದ ರಾಜ್ಯದಲ್ಲಿ ವಾರಪೂರ್ತಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಅ.17 ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 2 ದಿನ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೈಸೂರಿನಲ್ಲಿ ಅ.18ರಂದು ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಕೋಟ್:
ಫೆಸಿಫಿಕ್ ಸಾಗರ ಉದ್ದ, ವಿಶಾಲ ಮತ್ತು ಅಳವಾಗಿದ್ದು, ಸೈಕ್ಲೋನ್ ಬಲಗೊಳ್ಳುವುದಕ್ಕೆ ಶಕ್ತಿ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ಮಾನ್ಸೂನ್ ಸಂದರ್ಭದಲ್ಲಿ ಹೆಚ್ಚು ಸೈಕ್ಲೋನ್‌ಗಳು ಉಂಟಾಗುತ್ತದೆ. ಫೆಸಿಫಿಕ್ ಸಾಗರದಂತೆ ಅರಬ್ಬಿ ಸಮುದ್ರ ಅಷ್ಟೊಂದು ವಿಶಾಲ ಮತ್ತು ಆಳ ಇಲ್ಲದಿರುವ ಹಿನ್ನೆಲೆಯಲ್ಲಿ ಸೈಕ್ಲೋನ್ ರೂಪುಗೊಳ್ಳಲು ಅಷ್ಟೊಂದು ಶಕ್ತಿ ಸಿಗೋದಿಲ್ಲ. ಆದ್ದರಿಂದ, ನೈಋತ್ಯ ಮಾನ್ಸೂನ್‌ಕ್ಕಿಂತ ಈಶಾನ್ಯ ಮಾನ್ಸೂನ್ ಅವಧಿಯಲ್ಲಿ ಹೆಚ್ಚು ಸೈಕ್ಲೋನ್‌ಗಳು ರೂಪುಗೊಳ್ಳುತ್ತದೆ.
ಡಾ.ಶ್ರೀನಿವಾಸ ರೆಡ್ಡಿ. ಹಿರಿಯ ಹವಾಮಾನ ತಜ್ಞ.

 

 

 

 

 


Share this with Friends

Related Post