ಬೆಂಗಳೂರು: ದೇಶದ ಅತ್ಯುತ್ತಮ ಕ್ರಿಕೆಟ್ ಅಂಗಳಗಳಲ್ಲಿ ಒಂದಾಗಿರುವ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ವಿಜಯ್ ಹಜಾರೆ ಟ್ರೋಫಿ ಆಯೋಜನೆಗೆ ಅನುಮತಿ ಕೊಟ್ಟಿಲ್ಲ. ಇದು ರಾಜ್ಯ ಕಾಂಗ್ರೆಸ್ ಸರಕಾರದ ಉದ್ಧಟತನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು,ಈ ಸರ್ಕಾರ ಪುಕ್ಕಟೆ ಪ್ರಚಾರಕ್ಕಾಗಿ ಹೊರಟು ಕಾಲ್ತುಳಿತ ಪ್ರಕರಣ ನಡೆಯುವಂತಾಯಿತು.ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ರಾಜ್ಯ, ದೇಶ, ಜಗತ್ತಿನ ಗಮನ ಸೆಳೆದಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ತಮ್ಮ ಪುಕ್ಕಟೆ ಪ್ರಚಾರಕ್ಕಾಗಿ ಎರಡೆರಡು ಕಡೆ ಕಾರ್ಯಕ್ರಮ, ಮೆರವಣಿಗೆ ನಡೆಸಿದ್ದು, 10ಕ್ಕೂ ಹೆಚ್ಚು ಯುವಜನರ ಮಾರಣಹೋಮಕ್ಕೆ ರಾಜ್ಯ ಸರಕಾರ ಕಾರಣವಾಗಿತ್ತು. ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳು ಬಹಳ ಸುಲಲಿತವಾಗಿ ಕೈ ತೊಳೆದುಕೊಂಡರು. ಸರಕಾರದ ಬೇಜವಾಬ್ದಾರಿಯಿಂದ ಹೀಗಾಗಿದೆ. ಮುಖ್ಯಮಂತ್ರಿ- ಆರೋಪಿ ನಂ.1, ಉಪ ಮುಖ್ಯಮಂತ್ರಿಗಳು ಎರಡನೇ ಆರೋಪಿ ಆಗಬೇಕಿತ್ತು ಎಂದು ತಿಳಿಸಿದರು.
ಎಲ್ಲವನ್ನೂ ಆರ್‍ಸಿಬಿ, ಡಿಎನ್‍ಎ, ಬೇರೆ ಬೇರೆ ಏಜೆನ್ಸಿಗಳ ಮೇಲೆ ಹಾಕಿ ಎಸ್‍ಐಟಿ ರಚಿಸಿ ಅವರ ಮೇಲೆ ಆರೋಪ ಹೊರಿಸಿ ಕೈ ತೊಳಕೊಂಡರು. ಅವರು ನಿರಪರಾಧಿಗಳೆಂದಲ್ಲ ಎಂದರಲ್ಲದೆ, ಚಿನ್ನಸ್ವಾಮಿ ಕ್ರೀಡಾಂಗಣ ಒಂದು ಚರಿತ್ರಾರ್ಹ ಕೊಡುಗೆ ನೀಡಿದ ಸ್ಥಳ. ದೇಶದ ಕ್ರಿಕೆಟ್‍ಗೆ ಕರ್ನಾಟಕ ಅತಿ ದೊಡ್ಡ ಕೊಡುಗೆ ನೀಡಿದೆ ಎಂದು ವಿವರಿಸಿದರು. ಜಗತ್ ಪ್ರಸಿದ್ಧ ಆಟಗಾರರು ಇಲ್ಲಿನವರು ಎಂದರು. ಈ ಕ್ರೀಡಾಂಗಣದ ಸ್ಮಶಾನ ಮೌನಕ್ಕೆ ರಾಜ್ಯ ಸರಕಾರದ ಷಡ್ಯಂತ್ರ ಕಾರಣವಲ್ಲವೇ ಎಂದು ಕೇಳಿದರು. ವಿಜಯ್ ಹಜಾರೆ ಟ್ರೋಫಿಗೆ ಅನುಮತಿ ಕೊಟ್ಟಿಲ್ಲ. ಇದು ಸರಕಾರದ ಉದ್ಧಟತನ ಎಂದು ಆಕ್ಷೇಪ ವ್ಯಕ್ತಪಡಿಸಿದರು.

