Sun. Nov 3rd, 2024

ಅಪಘಾತವಲ್ಲ; ಉದ್ದೇಶಪೂರ್ವಕ-ಬಿಜೆಪಿ ಆಕ್ರೋಶ

Share this with Friends

ಮಡಿಕೇರಿ,ಏ.19: ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರಿಗೆ ಬೇಕೆಂದೇ ಡಿಕ್ಕಿ ಹೊಡೆಯಲಾಗಿದೆ ಅದು ಅಪಘಾತವಲ್ಲಾ ಎಂದು ಬಿಜೆಪಿ ಆರೋಪಿಸಿದೆ.

ಅಪಘಾತದಲ್ಲಿ ರಾಮಪ್ಪ(60) ಮೃತಪಟ್ಟಿದ್ದು, ರತೀಶ(35), ಚಂದ್ರರಾಜ(55) ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುವಾರ ಸಂಜೆ ಸಿದ್ದಾಪುರ ಕುಶಾಲನಗರ ಹೆದ್ದಾರಿ ನಡುವಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಾಲ್ನೂರು ತ್ಯಾಗತ್ತೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಸುಂಟಿಕೊಪ್ಪ ಕಂಬಿಬಾಣೆಯ ಯುವಕರ ತಂಡ ಎಸ್ಟೀಮ್ ಕಾರನ್ನು ವೇಗವಾಗಿ ಚಲಿಸಿ ರಸ್ತೆ ಬದಿಯಲ್ಲಿದ್ದ ಕಾರ್ಯಕರ್ತರ ಮೇಲೆ ನುಗ್ಗಿಸಿ ಪರಾರಿಯಾಗಿದ್ದರು.

ಅಪಘಾತ ನಡೆದ ತಕ್ಷಣ ಸ್ಥಳೀಯ ಗ್ರಾಮಸ್ಥರು ಬೆನ್ನಟ್ಟಿ ಕಾರನ್ನು ಅಡ್ಡಗಟ್ಟಿ ಶೌಖತ್‌ ಎಂಬಾತನನ್ನು ಹಿಡಿದು ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರಿನಲ್ಲಿದ್ದ ಉಳಿದವರು ತಲೆಮರೆಸಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ್ದು ಅಚಾತುರ್ಯ ಚಾಲನೆಯೋ ಅಥವಾ ಉದ್ದೇಶಪೂರ್ವಕವಾಗಿ ಹತ್ಯೆಗೆ ಸಂಚು ಮಾಡಿದ್ದರೊ ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಇಂದು ಮಡಿಕೇರಿ ಮತ್ತು ಸಿದ್ದಾಪುರ ರಸ್ತೆಯನ್ನು ಬಂದ್ ಮಾಡಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೊಡಗು ಮೈಸೂರು ಲೋಕಸಭಾ ಅಭ್ಯರ್ಥಿ ಯದುವೀರ್ ಮತ್ತು ಮಾಜಿ ಶಾಸಕರಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್ ವಿರಾಜಪುರ ತಾಲೂಕಿನ ಸಿದ್ದಾಪುರ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಿದ್ದಾಪುರ ಶವಾಗಾರ ರಸ್ತೆ ಮುಂದೆ ನೂರಾರು ಹಿಂದೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ,ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಸಿದ್ದಾಪುರ ನಗರ, ವಾಲ್ನೂರು ಗ್ರಾಮ, ಅರೆಕಾಡು ಗ್ರಾಮ, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಜಾಗೃತ ಕ್ರಮವಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಶುಕ್ರವಾರ ರಾತ್ರಿ 10 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.


Share this with Friends

Related Post