Fri. Nov 1st, 2024

ಅಂಗನವಾಡಿ ಕೇಂದ್ರಗಳಿಗೆ ಪುಟಾಣಿಗಳನ್ನು ಸ್ವಾಗತಿಸಿದ ಅಧಿಕಾರಿಗಳು

Share this with Friends

ಮಂಡ್ಯ,ಮೇ.28: ಅಂಗನವಾಡಿ ಕೇಂದ್ರಗಳು ಪುನರಾರಂಭವಾಗಿದ್ದು ಪುಟ್ಟ ಪುಟ್ಟ ಮಕ್ಕಳನ್ನು ಪೋಷಕರು ಅಂಗನವಾಡಿಗಳಿಗೆ ಸಂತೋಷದಿಂದ‌ ಕರೆತಂದರು.

ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕಿನ ಎಂ.ಜಿ. ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಅಧಿಕಾರಿಗಳು ಮಕ್ಕಳಿಗೆ ಸಿಹಿ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು.

ಮಂಡ್ಯ ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಸ್.ರಾಜಮೂರ್ತಿ ಅವರ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ತಿನ್ನಿಸಿ ಶುಭಹಾರೈಸಿದರು.

ಜತೆಗೆ ಅಂಗನವಾಡಿಗೆ ಬಂದ ಮಕ್ಕಳಿಗೆ ಗುಲಾಬಿ ಹೂವುಗಳನ್ನು ನೀಡಿ ಸ್ವಾಗತಿಸಿದರು.

ಇದೇ ವೇಳೆ ಕಲಿಕಾಕೇಂದ್ರ ಹಾಗೂ ತರಗತಿ ಕೊಠಡಿಗೆ ಚಾಲನೆ ನೀಡಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣವನ್ನು ನೀಡಲು ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ತರಬೇತಿಯನ್ನು ನೀಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಿಇಒ ನಿರ್ದೇಶನ ನೀಡಿದರು.

ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ಮಾತನಾಡಿ ಬೇಸಿಗೆ ರಜಾ ನಂತರ ಮಕ್ಕಳು ಮತ್ತೆ ಮರಳಿ ಅಂಗನವಾಡಿ ಕೇಂದ್ರಗಳತ್ತ ಬಂದಿದ್ದಾರೆ. ಜಿಲ್ಲೆಯಲ್ಲಿರುವ ೫೮೮ ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಸಿದ್ದಗೊಳಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ಪೌಷ್ಢಿಕಾಂಶ ಆಹಾರದ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕೆಂದು ಮನವಿ ಮಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಆರ್.ಕುಮಾರಸ್ವಾಮಿ ನೇತೃತ್ವದಲ್ಲಿ ಶೇಖ್ ತನ್ವೀರ್ ಅಸೀಫ್, ಮಂಡ್ಯ ತಾಲ್ಲೋಕಿನ ಹೊಸ ಬೂದನೂರು, ಮಂಡ್ಯ ನಗರದಲ್ಲಿರುವ ಶಂಕರಮಠ, ಎಸ್.ಡಿ.ಜಯರಾಂ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳಿಗೆ ಹೂ. ಸಿಹಿ ವಿತರಿಸಿ ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡರು.


Share this with Friends

Related Post