Sat. Nov 2nd, 2024

ಚುನಾವಣೆಯಲ್ಲಿ ಸೋತ ಸೇಡು ತೀರಿಸಿಕೊಳ್ಳಲು ತೈಲ ದರ ಏರಿಕೆ:ಅಶೋಕ್

Share this with Friends

ಬೆಂಗಳೂರು, ಜೂ.16: ಲೋಕಸಭೆ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ತೈಲ ದರ ಏರಿಕೆ ಮಾಡಿದೆ ಎಂದು ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ತೈಲದರ ಏರಿಕೆ ಮೂಲಕ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ ಎಂದು ಕಿಡಿ ಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ. ಹಾಲಿನ ದರ, ಆಲ್ಕೋಹಾಲ್ ದರ, ಸ್ಟಾಂಪ್ ಡ್ಯೂಟಿ, ಮಾರ್ಗಸೂಚಿ ದರ, ವಿದ್ಯುತ್ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಿದೆ ಎಂದು ಆರೋಪಿಸಿದರು ‌

ಬಿಜೆಪಿ ಸರ್ಕಾರದಲ್ಲಿ ಒಂದು ರೂ ಬೆಲೆ ಏರಿಕೆಯಾದಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು.15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ದರ ಏರಿಸಿದ್ದಾರೆ ಎಂದು ದೂರಿದರು.

ಗ್ಯಾರಂಟಿಗಾಗಿ 55,000 ಕೋಟಿ ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ, ಆದ್ದರಿಂದ ಜನರ ಮೇಲೆ 3-4 ಸಾವಿರ ಕೋಟಿ ರೂ‌. ಹೊರೆ ಹಾಕಿ ತೈಲ ದರ ಏರಿಸಲಾಗಿದೆ,ಹಾಗಾಗಿ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿ ದರವೂ ಏರಲಿದೆ, ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದು ಎಚ್ಚರಿಸಿದರು.

ಸಂಸತ್ತಿನಲ್ಲಿ 100 ಸೀಟು ಪಡೆಯಲಾಗದ ಕಾಂಗ್ರೆಸ್ ಪೆಟ್ರೋಲ್ ದರವನ್ನು 100 ರೂಪಾಯಿಗೂ ಹೆಚ್ಚು ಮಾಡಿದೆ. ರಾಹುಲ್ ಗಾಂಧಿ ಹೇಳಿದಂತೆ ಟಕಾಟಕ್ ಎಂದು ತೈಲ ದರ ಏರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಜನರು ಮತ ನೀಡಿಲ್ಲ ಎಂಬ ಕಾರಣಕ್ಕೆ ಸರ್ಕಾರ ದರ ಏರಿಸಿದೆ,ಹಿಂದೆ ಬಿಜೆಪಿ ಸರ್ಕಾರ 7 ರೂ. ಕಡಿಮೆ ಮಾಡಿತ್ತು ಕಾಂಗ್ರೆಸ್ ಸರ್ಕಾರ ದರ ಏರಿಕೆ ವಾಪಾಸ್ ಪಡೆಯಲಿ ಎಂದು ಒತ್ತಾಯಿಸಿದರು.

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ ಬಿಡಿಎ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿಯ ಆಸ್ತಿಗಳನ್ನು ಕೂಡ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಇನ್ನೊಂದು ವರ್ಷದಲ್ಲಿ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ ಎಂದು ಅಶೋಕ ಟೀಕಿಸಿದರು.

ತೈಲ ದರ ಇಳಿಕೆಗೆ ಒತ್ತಾಯಿಸಿ ಜೂನ್ 17 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ,ಅಲ್ಲದೆ ರಾಜ್ಯಾದ್ಯಂತ ಕೂಡಾ ಪ್ರತಿಭಟನೆ ನಡೆಯಲಿದೆ ಎಂದು ಆರ್.ಅಶೋಕ್ ತಿಳಿಸಿದರು.


Share this with Friends

Related Post