ಮಂಗಳೂರು: ಮುಖ್ಯಮಂತ್ರಿ ಆಗುವ ಕುರಿತು ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇನೆ, ಅಧಿಕಾರ ಹಂಚಿಕೆಗೆ ಸಮಯವೇ ಉತ್ತರ ನೀಡಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನೀವು ಸಿಎಂ ಆಗಬೇಕು ಎಂಬ ಕನಸು ಜನರಿಗಿದೆ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ನಿಮಗೂ (ಮಾಧ್ಯಮ) ಇದೆ. ಪಕ್ಷ ಏನು ಹೇಳುತ್ತದೆ ಅದನ್ನು ಕೇಳಬೇಕು” ಎಂದು ತಿಳಿಸಿದರು.
ದಲಿತ ಸಂಘಟನೆಗಳು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, “ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ” ಎಂದರು. ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, “ಸಮಯವೇ ಉತ್ತರ ನೀಡಲಿದೆ” ಎಂದರು.
ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ,”ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ” ಎಂದು ತಿಳಿಸಿದರು.

