Mon. Dec 23rd, 2024

ಕಾಂತೇಶ್‌ ವಿರುದ್ಧ ಅಶ್ಲೀಲ ಫೋಟೊ, ವೀಡಿಯೊ ಪ್ರಸಾರ ಮಾಡದಂತೆ‌ ಆದೇಶ

Share this with Friends

ಬೆಂಗಳೂರು,ಮೇ.1: ಕೆ ಎಸ್‌ ಈಶ್ವರಪ್ಪ ಪುತ್ರ ಕೆ ಇ ಕಾಂತೇಶ್‌ ವಿರುದ್ಧ ಯಾವುದೇ ಅಶ್ಲೀಲ ಫೋಟೊ, ವಿಡಿಯೋ ಪ್ರಸಾರ ಮಾಡದಂತೆ ಬೆಂಗಳೂರಿನ ನ್ಯಾಯಾಲಯ ಪ್ರತಿಬಂಧಕಾದೇಶ ಹೊರಡಿಸಿದೆ.

ಸ್ಕ್ರೀನ್‌ ಶಾಟ್‌ ಅಥವಾ ಅಶ್ಲೀಲ ಆಡಿಯೊಗಳನ್ನು ಕೂಡಾ ಪ್ರಸಾರ ಮಾಡದಂತೆ ಬೆಂಗಳೂರಿನ ನ್ಯಾಯಾಲಯವು ಮಾಧ್ಯಮಗಳಿಗೆ ಮಧ್ಯಂತರ ಪ್ರತಿಬಂಧಕಾದೇಶ ಮಾಡಿದೆ.

ಕೆ ಇ ಕಾಂತೇಶ್‌ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಡಿ ಪಿ ಕುಮಾರಸ್ವಾಮಿ ಈ ಆದೇಶ ಮಾಡಿದ್ದಾರೆ.

1ರಿಂದ 50ನೇ ಪ್ರತಿವಾದಿಗಳು, ಅವರ ಪ್ರತಿನಿಧಿಗಳು, ಸೇವಕರು, ಏಜೆಂಟರು, ಆಡಳಿತಗಾರರು, ಅವರು ನಿಯೋಜಿಸಿದವರು ಇತ್ಯಾದಿ ಯಾರೇ ಆದರೂ ದೂರಿನಲ್ಲಿ ಉಲ್ಲೇಖಿಸಿರುವಂತೆ ಯಾವುದೇ ರೀತಿಯ ಅಶ್ಲೀಲ ವಿಡಿಯೊ ಪ್ರಸಾರ/ಮದ್ರಣ/ಹಂಚಿಕೆ ಮಾಡದಂತೆ ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದು, ಪ್ರತಿವಾದಿ ಮಾಧ್ಯಮಗಳಿಗೆ ನೋಟಿಸ್‌, ಸಮನ್ಸ್‌ ಜಾರಿ ಮಾಡಿ ವಿಚಾರಣೆಯನ್ನು ಆಗಸ್ಟ್‌ 3ಕ್ಕೆ ಮುಂದೂಡಿದೆ.

ಫಿರ್ಯಾದಿ ಕಾಂತೇಶ್‌ ಪರ ವಕೀಲ ಎಂ ವಿನೋದ್‌ ಕುಮಾರ್‌ ಅವರು ಪ್ರತಿವಾದಿಗಳು ಇಂಟರ್‌ನೆಟ್‌, ಟಿವಿ ಮಾಧ್ಯಮ, ಪತ್ರಿಕೆಗಳಲ್ಲಿ ಫಿರ್ಯಾದಿ ವಿರುದ್ಧ ಆಕ್ಷೇಪಾರ್ಹವಾದ ಸುದ್ದಿ ಪ್ರಸಾರ,ಮುದ್ರಣ ಮಾಡುತ್ತಿದ್ದಾರೆ.

ಮಾಧ್ಯಮಗಳು ಫಿರ್ಯಾದಿಯ ವರ್ಚಸ್ಸಿಗೆ ಹಾನಿ ಮಾಡಲು ಯತ್ನಿಸುತ್ತಿವೆ. ಲೋಕಸಭಾ ಚುನಾವಣೆಯಂಥ ಈ ಮಹತ್ವದ ಸಂದರ್ಭದಲ್ಲಿ ಹೆಸರು ಕೆಡಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಕಕ್ಷಿದಾರರಿಗೆ ಮಾನಹಾನಿಯಿಂದ ರಕ್ಷಣೆ ಅಗತ್ಯವಾಗಿದೆ. ಹಾಗಾಗಿ, ದಾವೆ ಇತ್ಯರ್ಥವಾಗುವವರೆಗೆ ಸಂಬಂಧಿತ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಬೇಕು ಎಂದು ಕೋರಿದ್ದರು.


Share this with Friends

Related Post