Sat. Mar 7th, 2026

ನಮ್ಮ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ 70-75 ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ: ಸಿಎಂ ಸಿದ್ದರಾಮಯ್ಯ

Share this with Friends

ಬೆಂಗಳೂರು:ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಮೀಸಲಾತಿ ಇರಬೇಕು ಎನ್ನುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾತಾಗಿತ್ತು ಹಾಗಾಗಿ ನಮ್ಮ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ 70-75 ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ, “ಎಲ್.ಜಿ.ಹಾವನೂರು ವರದಿಯ ಸುವರ್ಣ ಮಹೋತ್ಸವ” ಉದ್ಘಾಟಿಸಿ ಮಾತನಾಡಿದ ಅವರು,ನಮ್ಮ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಯನ್ನು ಒಪ್ಪಿಕೊಂಡು ಜಾರಿ ಮಾಡಲು ಸಿದ್ಧವಿದೆ. ಮೀಸಲಾತಿ ಪ್ರಮಾಣವನ್ನು ಶೇ 70-75 ಕ್ಕೆ ಹೆಚ್ಚಿಸುವ ಬಗ್ಗೆಯೂ ಆಸಕ್ತಿ ಹೊಂದಿದೆ.ನನಗೆ ಕೊನೆಯ ಉಸಿರು ಇರುವವರೆಗೂ, ನಾನು ರಾಜಕಾರಣದಲ್ಲಿ ಇರುವವರೆಗೂ ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ ಎಂದು ಮತ್ತೆ ಸ್ಪಷ್ಟಪಡಿಸಿದರು.

ನಮ್ಮಲ್ಲಿ ಶಿಕ್ಷಣ ಪ್ರಮಾಣ ಶೇ.68 ರಷ್ಟಿದ್ದರೂ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಅನುಕೂಲ ಮಾಡಿಕೊಂಡವರು ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದ್ದರೆ. ಹಿಂದುಳಿದವರು ಇನ್ನೂ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬಂದಿಲ್ಲ. ಮೇಲು ಜಾತಿಯ ಬಡವರನ್ನೂ ಬಹುವಚನದಿಂದ ಕರೆಯುವುದು, ಕೆಳ ಜಾತಿಯ ಶ್ರೀಮಂತರನ್ನು ಏಕವಚನದಲ್ಲಿ ಕರೆಯುವುದೇ ಗುಲಾಮಿ ಮನಸ್ಥಿತಿಯ ಸಂಕೇತ. ವಿದ್ಯಾವಂತರು ವಿದ್ಯೆ ಪಡೆದಷ್ಟೂ ಮೌಡ್ಯವನ್ನು ಹೆಚ್ಚೆಚ್ಚು ನಂಬುತ್ತಾರೆ. ಬಡತನಕ್ಕೆ ಹಣೆಬರಹ ಕಾರಣ ಎಂದು ನಂಬುವವರು ಇನ್ನೂ ಇದ್ದಾರೆ. ಹಿಂದುಳಿದ ವರ್ಗಗಳ ವಿದ್ಯಾವಂತರೂ ಮೌಡ್ಯವನ್ನು ನಂಬುತ್ತಾರೆ.

ಬುದ್ದ, ಬಸವಣ್ಣ, ಅಂಬೇಡ್ಕರ್ ಅವರೆಲ್ಲಾ ಬಂದು ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರು. ಇವರು ಹೋರಾಡಿದಾಗ ಜಾತಿ ವ್ಯವಸ್ಥೆ ಸಡಿಲ ಆದಂತೆ ಕಾಣುತ್ತದೆ. ಆದರೆ ಬಳಿಕ ಮತ್ತೆ ಗಟ್ಟಿಯಾಗುತ್ತದೆ. ಜಾತಿ ವ್ಯವಸ್ಥೆ ಮಾತ್ರ ಹೋಗುತ್ತಿಲ್ಲ.  ಅದಕ್ಕೇ ಆರ್ಥಿಕ, ಸಾಮಜಿಕ ಅಸಮಾನತೆಗೆ ತುತ್ತಾಗಿರುವ ಜನರೇ ಸ್ವಾತಂತ್ರ್ಯ ಸೌಧವನ್ನು ದ್ವಂಸ ಮಾಡುತ್ತಾರೆ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದನ್ನು ನಾವು ಮರೆಯಬಾರದು ಎಂದರು.

ಹಿಂದುಳಿದವರು-ದಲಿತರು ತಮ್ಮ ವಿರೋಧಿಗಳಾದ  BJP-RSS-ABVP ಸೇರ್ತಾರಲ್ಲಾ ಇವರಿಗೆ ಏನು ಹೇಳೋದು. BJP-RSS ಸಿದ್ಧಾಂತ ಹಿಂದುಳಿದವರ ಶತ್ರು ಎಂದು ಗೊತ್ತಿದ್ದೂ ಹೋಗಿ ಹೋಗಿ ಅಲ್ಲಿಗೇ ಸೇರ್ತಾರಲ್ಲ ಇದಕ್ಕೆ ಏನು ಮಾಡೋದು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಅಪಾರ ಬೇಸರ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿಯವರಿಗೆ ಸೈದ್ಧಾಂತಿಕ ಬದ್ಧತೆ ಇದ್ದಿದ್ದರಿಂದಲೇ ಜಾತಿ ಗಣತಿಗೆ ಒತ್ತಡ ಹೇರಿದರು. ಮೊನ್ನೆ  “ಏನಾಯ್ತು ನಿಮ್ಮ ಗಣತಿ” ಎಂದು ನನಗೆ ಕೇಳಿದರು. ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇರುವುದರಿಂದಲೇ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಜಾತಿ ಗಣತಿ ನಡೆಸುವಂತೆ ಮಾಡಿದ್ದಾರೆ.ನಮ್ಮ ಸರ್ಕಾರ ಕೂಡ ಈ ಗಣತಿಯನ್ನು ಒಪ್ಪಿಕೊಂಡು ಜಾರಿ‌ಮಾಡಲು ಬದ್ದವಾಗಿದೆ ಎಂದರು.


Share this with Friends

Related Post