Fri. Mar 6th, 2026

ನಾರಾಯಣ ಗುರುಗಳ ಆದರ್ಶಗಳನ್ನು ನಮ್ಮ ಸರ್ಕಾರ ಮುಂದುವರಿಸುತ್ತಿದೆ: ಸಿಎಂ ಸಿದ್ದರಾಮಯ್ಯ

Share this with Friends

ಕೇರಳ (ತಿರುವನಂತಪುರ): ಕರ್ನಾಟಕ ಸರ್ಕಾರವು ಸಮಾನತೆ ಮತ್ತು ಮಾನವ ಘನತೆಯನ್ನು ಆದ್ಯತೆಯಾಗಿಸುವ ಮೂಲಕ ನಾರಾಯಣ ಗುರುಗಳ ಆದರ್ಶಗಳನ್ನು ಮುಂದುವರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೇರಳ ತಿರುವನಂತಪುರದ 93ನೇ ಶಿವಗಿರಿ ತೀರ್ಥಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದು ದೊಡ್ಡ ಅನ್ಯಾಯ ಎಂದು ಟ್ಯಾಗೋರ್ ಒಪ್ಪಿಕೊಂಡರು. ಟ್ಯಾಗೋರ್ ಅವರ ‘ವಿಶ್ವಮಾನವ’ (Universal Man) ಪರಿಕಲ್ಪನೆಗೆ ನಾರಾಯಣ ಗುರುಗಳ ಚಿಂತನೆಗಳೇ ಸ್ಫೂರ್ತಿ.ಹೀಗೆ ನಾರಾಯಣ ಗುರುಗಳು ಆಧ್ಯಾತ್ಮಿಕತೆ, ವೈಚಾರಿಕತೆ, ಮಾನವತಾವಾದ ಮತ್ತು ಸಾಮಾಜಿಕ ನ್ಯಾಯವನ್ನು ಬೆಸೆಯುವ ಮೂಲಕ ಆಧುನಿಕ ಭಾರತದ ಸೈದ್ಧಾಂತಿಕ ಹಾದಿಯನ್ನು ನಿರ್ಮಿಸಿದರು ಎಂದರು.

ಜಾತಿ ಮಾಯವಾಗಿಲ್ಲ, ಅದು ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಕೋಮುವಾದವು ಈಗ ಶ್ರೇಣೀಕೃತ ವ್ಯವಸ್ಥೆಯ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ; ಅದು ಗುರುತು, ಭಯ ಮತ್ತು ಅಹಂಕಾರದ ಭಾಷೆಯಲ್ಲಿ ಮಾತನಾಡುತ್ತಿದೆ.ನಾರಾಯಣ ಗುರುಗಳು ಈ ಅಪಾಯವನ್ನು ಮುನ್ಸೂಚಿಸಿದ್ದರು. ಧರ್ಮವು ಕರುಣೆ ಮತ್ತು ನೈತಿಕತೆಯಿಂದ ದೂರವಾದಾಗ, ಅದು ಕೇವಲ ಅಧಿಕಾರ ಚಲಾಯಿಸುವ ಸಾಧನವಾಗುತ್ತದೆ ಎಂದು ಅವರು ಅರ್ಥಮಾಡಿಕೊಂಡಿದ್ದರು ಎಂದರು.

ಧಾರ್ಮಿಕ ಬಹುಸಂಖ್ಯಾತವಾದ, ನ್ಯಾಯ ಮತ್ತು ಸಮಾನತೆಯಿಲ್ಲದ ಯಾವುದೇ ರಾಷ್ಟ್ರೀಯತೆ ಅಥವಾ ರಾಜಕೀಯವು ಮನುಕುಲಕ್ಕೆ ಶಾಪ ಎಂದು ಗುರುಗಳು ಎಚ್ಚರಿಸಿದ್ದರು.ಸಾಮಾಜಿಕ ನ್ಯಾಯವಿಲ್ಲದ ರಾಷ್ಟ್ರ ನಿರ್ಮಾಣವು ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗಲಿದೆಯೇ ಹೊರತು ಪ್ರಜಾಪ್ರಭುತ್ವವಾಗುವುದಿಲ್ಲ ಎಂದ ಅವರ ಸಂದೇಶ ಸಾರಿದ್ದರು.ಕೇರಳದಲ್ಲಿ ನೆಲೆಸಿದ್ದರೂ, ನಾರಾಯಣ ಗುರುಗಳ ಪ್ರಭಾವವು ಭಾಷೆ ಮತ್ತು ರಾಜ್ಯದ ಗಡಿಗಳನ್ನು ಮೀರಿ ಕರ್ನಾಟಕದ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಮಲೆನಾಡು ಭಾಗಗಳಲ್ಲಿ ಸುಧಾರಣಾ ಚಳವಳಿಗಳನ್ನು ರೂಪಿಸಿತು ಎಂದರು.

ಕರ್ನಾಟಕ ಕರಾವಳಿಯ ಬಿಲ್ಲವ, ಈಡಿಗ, ಮೊಗವೀರ ಮತ್ತು ಇತರ ಹಿಂದುಳಿದ ಸಮುದಾಯಗಳು ನಾರಾಯಣ ಗುರುಗಳ ಸ್ವಾಭಿಮಾನ, ಶಿಕ್ಷಣ ಮತ್ತು ಸಂಘಟನೆಯ ಕರೆಯಿಂದ ಸ್ಫೂರ್ತಿ ಪಡೆದವು. ಇದು ಈ ಪ್ರದೇಶದಲ್ಲಿ ಕೋಮು ಶಕ್ತಿಗಳ ವಿಭಜನೆಯ ಪ್ರಯತ್ನಗಳಿಗೆ ಬಲವಾದ ಪ್ರತಿರೋಧವನ್ನು ಒಡ್ಡಲು ಪ್ರಮುಖ ಕಾರಣವಾಗಿದೆ ಎಂದರು.

ಬಸವಣ್ಣನವರ ‘ಕಾಯಕ’ ತತ್ವವು ನಾರಾಯಣ ಗುರುಗಳ ಆರ್ಥಿಕ ಸ್ವಾವಲಂಬನೆಯ ಚಿಂತನೆಯಲ್ಲಿ ಪ್ರತಿಧ್ವನಿಸುತ್ತದೆ.‌ಬಸವಣ್ಣನವರು ವಚನಗಳ ಮೂಲಕ ಭಕ್ತಿಯನ್ನು ಜನಸಾಮಾನ್ಯರ ಕೈಗೆ ನಿಲುಕುವಂತೆ ಮಾಡಿದರೆ, ನಾರಾಯಣ ಗುರುಗಳು ದೈವತ್ವವನ್ನೇ ಎಲ್ಲರಿಗೂ ಹಂಚುವ ಮೂಲಕ ಮನುಷ್ಯರು ಹುಟ್ಟಿನಿಂದ ಮೇಲುಕೀಳಲ್ಲ, ಅಸ್ತಿತ್ವದಿಂದ ಸಮಾನರು ಎಂದು ಸಾರಿದರು.ಅವರಿಬ್ಬರೂ ಧರ್ಮವನ್ನು ಬಹಿಷ್ಕಾರದ ಸಾಧನದಿಂದ ಸಾಮಾಜಿಕ ನ್ಯಾಯದ ಭಾಷೆಯನ್ನಾಗಿ ಪರಿವರ್ತಿಸಿದರು ಎಂದರು.

ಕರ್ನಾಟಕ ಸರ್ಕಾರವು ಸಮಾನತೆ ಮತ್ತು ಮಾನವ ಘನತೆಯನ್ನು ಆದ್ಯತೆಯಾಗಿಸುವ ಮೂಲಕ ನಾರಾಯಣ ಗುರುಗಳ ಆದರ್ಶಗಳನ್ನು ಮುಂದುವರಿಸುತ್ತಿದೆ.2016ರಲ್ಲಿ ‘ನಾರಾಯಣ ಗುರು ಜಯಂತಿ’ಯನ್ನು ಘೋಷಿಸುವ ಮೂಲಕ, ಅವರ ಸಾಮಾಜಿಕ ಸಾಮರಸ್ಯದ ಸಂದೇಶವು ಕರ್ನಾಟಕದ ಮೂಲೆ ಮೂಲೆಗೂ ತಲುಪುವಂತೆ ಮಾಡಲಾಗುತ್ತಿದೆ.ಅವರ ಬರವಣಿಗೆಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಲಾಗುತ್ತಿದೆ, ಈ ಮೂಲಕ ನಾವು ಜ್ಞಾನವನ್ನು ಎಲ್ಲರಿಗೂ ಮುಕ್ತಗೊಳಿಸಿ, ಜನರಲ್ಲಿ ವಿಮರ್ಶಾತ್ಮಕ ಪ್ರಜ್ಞೆಯನ್ನು ಜಾಗೃತಗೊಳಿಸಲಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ’ವನ್ನು ಸ್ಥಾಪಿಸುವ ಮೂಲಕ ಅವರ ಪರಂಪರೆಯನ್ನು ಗಟ್ಟಿಗೊಳಿಸಲು 2013 ರಲ್ಲಿ ₹1 ಕೋಟಿ ಮತ್ತು 2023 ರಲ್ಲಿ ಹೆಚ್ಚುವರಿ ₹22 ಕೋಟಿ ಅನುದಾನವನ್ನು ನೀಡಲಾಗಿದೆ ಎಂದರು.

ಹುಟ್ಟು ಎಂದಿಗೂ ಮನುಷ್ಯನ ಭವಿಷ್ಯವನ್ನು ನಿರ್ಧರಿಸಬಾರದು ಎಂಬ ಗುರುಗಳ ನಂಬಿಕೆಯಲ್ಲಿ ಇಟ್ಟಿರುವ ಈ ಹೆಜ್ಜೆಗಳು, ಸಾಮಾಜಿಕ ನ್ಯಾಯದ ಕುರಿತ ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.ನಾನು ಧಾರ್ಮಿಕ ಮುಖಂಡರಿಗೆ ದ್ವೇಷದ ವಿರುದ್ಧ ಧ್ವನಿಯೆತ್ತಲು ಹಾಗೂ ವಿದ್ವಾಂಸರಿಗೆ ನಾರಾಯಣ ಗುರುಗಳ ತತ್ವಜ್ಞಾನವನ್ನು ತರಗತಿಗಳಿಗೆ ಕೊಂಡೊಯ್ಯಲು ಕರೆ ನೀಡುತ್ತೇನೆ. ಯುವಜನತೆಯು ಅನ್ಯಾಯವನ್ನು ಪ್ರಶ್ನಿಸಲು ಮತ್ತು ರಾಜಕೀಯ ಸಂಸ್ಥೆಗಳು ನೈತಿಕ ಮೌಲ್ಯಗಳೊಂದಿಗೆ ಆಡಳಿತ ನಡೆಸುವಂತೆ ಕರೆ ನೀಡಿದರು.

ವಿಭಜನೆಯ ರಾಜಕೀಯವನ್ನು ತಿರಸ್ಕರಿಸಿ, ಘನತೆಯ ರಾಜಕೀಯವನ್ನು ಸ್ವಾಗತಿಸೋಣ. ದ್ವೇಷವು ದ್ವೇಷವನ್ನು ಹೆಚ್ಚಿಸುತ್ತದೆ, ಮೌನವು ಅನ್ಯಾಯವನ್ನು ಸಮರ್ಥಿಸುತ್ತದೆ ಮತ್ತು ಸಂವಾದವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ನೆನಪಿಡೋಣ.ನಾರಾಯಣ ಗುರು ಮತ್ತು ಮಹಾತ್ಮಾ ಗಾಂಧಿಯವರ ನಡುವಿನ ಸಂವಾದವು ನಮಗೆ ಧೈರ್ಯ, ಸ್ಪಷ್ಟತೆ ಮತ್ತು ಆತ್ಮಶಕ್ತಿಯನ್ನು ನೀಡುತ್ತಿರಲಿ ಎಂದರು.


Share this with Friends

Related Post