Thu. Mar 5th, 2026

“ನಮ್ಮ ಬದುಕು ಪ್ರಕೃತಿಯ ಮೇಲೆ ನಿಂತಿದೆ, ಸುವರ್ಣಮುಖಿಯನ್ನು ಉಳಿಸಿಕೊಳ್ಳೋಣ”: ನಟ ಅನಿರುದ್ಧ ಜತ್ಕರ್ ಕಳಕಳಿ

Share this with Friends

ಬೆಂಗಳೂರು: “ನಮ್ಮ ಪರಿಸರ ಮತ್ತು ಜಲಮೂಲಗಳು ಕೇವಲ ಪ್ರಕೃತಿಯ ಅಂಗವಲ್ಲ, ಅವು ನಮ್ಮ ಸಂಸ್ಕೃತಿಯ ಜೀವಾಳ. ಬನ್ನೇರುಘಟ್ಟದ ಕಾಡಿನ ನಡುವೆ ಹರಿಯುವ ‘ಸುವರ್ಣಮುಖಿ’ ಹೊಳೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು” ಎಂದು ಜನಪ್ರಿಯ ನಟ ಅನಿರುದ್ಧ ಜತ್ಕರ್ ತಿಳಿಸಿದ್ದಾರೆ.

‘ಸ್ವಚ್ಛತೆಗಾಗಿ ನಾನು ಸಹಭಾಗಿ’ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸುವರ್ಣಮುಖಿ ಹೊಳೆಯ ಮಹತ್ವವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.”ಆನೇಕಲ್ ಬೆಟ್ಟಗಳಲ್ಲಿ ಜನ್ಮತಾಳಿ, ತೊಟ್ಟಿಕಲ್ಲು ಜಲಪಾತದ ಸೌಂದರ್ಯವನ್ನು ಧಾರೆ ಎರೆದು, ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದಲ್ಲಿ ಹರಿಯುವ ಈ ಹೊಳೆ ಸಾವಿರಾರು ಮೂಕ ಪ್ರಾಣಿಗಳಿಗೆ ಆಸರೆಯಾಗಿದೆ. ಆನೆ, ಹುಲಿ, ಚಿರತೆಗಳಂತಹ ವನ್ಯಜೀವಿಗಳು ಈ ನೀರನ್ನೇ ನಂಬಿಕೊಂಡಿವೆ. ಇಂತಹ ಪವಿತ್ರ ಜಲಮೂಲವನ್ನು ನಾವು ಮಲಿನಗೊಳಿಸಬಾರದು” ಎಂದು ಅವರು ಮಾರ್ಮಿಕವಾಗಿ ಹೇಳಿದರು.

ಮಲೆ ಮಹದೇಶ್ವರ ದೇವಾಲಯದ ಭಕ್ತರಲ್ಲಿ ಮನವಿ ಮಾಡಿದ ಅವರು, “ದೈವದ ಹೆಸರಿನಲ್ಲಿ ನಾವು ಪ್ರಕೃತಿಯನ್ನು ಪೂಜಿಸುತ್ತೇವೆ. ಆದರೆ ಅದೇ ದೈವ ಸನ್ನಿಧಿಯ ಬಳಿ ಹೊಳೆಯನ್ನು ಗಲೀಜು ಮಾಡುವುದು ಸರಿಯಲ್ಲ. ಸ್ನಾನ ಮಾಡುವಾಗ ಅಥವಾ ನೀರನ್ನು ಸೇವಿಸುವಾಗ ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಿ. ನಮ್ಮ ಇಂದಿನ ಒಂದು ಸಣ್ಣ ಜವಾಬ್ದಾರಿ, ಮುಂದಿನ ಪೀಳಿಗೆಗೆ ದೊಡ್ಡ ಉಡುಗೊರೆಯಾಗಲಿದೆ” ಎಂದರು.

2020 ರಿಂದ 2026 ರವರೆಗೆ ನಡೆಯುತ್ತಿರುವ ಈ 5 ವರ್ಷಗಳ ಸುದೀರ್ಘ ಸಂರಕ್ಷಣಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನಿರುದ್ಧ್, ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕೂಡಲೇ ಎಚ್ಚೆತ್ತುಕೊಂಡು ಹೊಳೆಯ ಹೂಳೆತ್ತುವಿಕೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

“ಬನ್ನಿ, ನಾವೆಲ್ಲರೂ ಕೈಜೋಡಿಸೋಣ. ಪ್ರಕೃತಿ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ,” ಎನ್ನುವ ಸಂದೇಶ ನೀಡಿದರು.

 


Share this with Friends

Related Post