ನೋಯ್ಡಾ: ತನ್ನ ನಾಲ್ವರು ಮಕ್ಕಳನ್ನು ಕರೆದುಕೊಂಡು ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಹಾಗೂ ಸದ್ಯ ಗ್ರೇಟರ್ ನೋಯ್ಡಾದಲ್ಲಿ ವಾಸಿಸುತ್ತಿರುವ ಪಾಕ್ ಪ್ರಜೆ ಸೀಮಾ ಹೈದರ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಿದ್ದಾರೆ.
ನಾನು ಹಿಂದೂ ಧರ್ಮ ಅಳವಡಿಸಿಕೊಂಡಿದ್ದೇನೆ ಮತ್ತು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾರೊಂದಿಗೆ ವಿವಾಹವಾಗಿದ್ದೇನೆ. ಪ್ರಧಾನಿ ಮೋದಿ ಅವರ ನಿರ್ಧಾರಕ್ಕೆ ನಾನು ಶ್ಲಾಘಿಸಿದ್ದೇನೆ. ನನಗೆ ಭಾರತೀಯ ಪೌರತ್ವವನ್ನು ಪಡೆಯಲು ಸಿಎಎ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಸಿಎಎ ಜಾರಿ ಮಾಡಿದ್ದಕ್ಕೆ ನನಗೆ ತುಂಬಾ ಸಂತಸವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ. ಹೀಗಾಗಿ ನನ್ನ ಜೀವನದುದ್ದಕ್ಕೂ ಅವರಿಗೆ ಋಣಿಯಾಗಿರುತ್ತೇನೆ ಎಂದು ಸೀಮಾ ಹೇಳಿದ್ದಾರೆ.
ಭದ್ರತೆ ಹೆಚ್ಚಳ :
ಪೌರತ್ವ ತಿದ್ದುಪಡಿ ಕಾಯ್ದೆ 2019 ಜಾರಿಗೊಳಿಸಿ ಕೇಂದ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದ ನಂತರ ಈಶಾನ್ಯ ದೆಹಲಿ, ಶಾಹೀನ್ ಬಾಗ್, ಜಾಮಿಯಾ ಮತ್ತು ರಾಷ್ಟ್ರ ರಾಜಧಾನಿಯ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಭಾಗಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಈಶಾನ್ಯ ಮತ್ತು ಆಗ್ನೇಯ ದೆಹಲಿಯ ಭಾಗಗಳಲ್ಲಿ ಧ್ವಜ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯು 2020 ರಲ್ಲಿ ಸಿಎಎ ಮತ್ತು ಎನ್‌ಆರ್‌ಸಿ(ರಾಷ್ಟ್ರೀಯ ನಾಗರಿಕರ ನೋಂದಣಿ) ವಿರೋಧಿಸಿ ಭಾರೀ ಪ್ರತಿಭಟನೆ ಕೋಮುಗಲಭೆಗಳಿಗೆ ಸಾಕ್ಷಿಯಾಗಿತ್ತು.”ದಿಲ್ಲಿಯ ಈಶಾನ್ಯ ಜಿಲ್ಲೆಯ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ” ಎಂದು ಈಶಾನ್ಯ ಡಿಸಿಪಿ ಜಾಯ್ ಟಿರ್ಕಿ ಅವರು ಪಿಟಿಐಗೆ ತಿಳಿಸಿದ್ದಾರೆ.