ಬೆಂಗಳೂರು:ಆಂಬ್ಯುಲೆನ್ಸ್ ಮತ್ತು ಆಸ್ಪತ್ರೆಗಳ ನಡುವೆ ನೇರ ಸಂವಹನ ವ್ಯವಸ್ಥೆ ಜಾರಿಯಾದಲ್ಲಿ ರೋಗಿ ಆಸ್ಪತ್ರೆ ತಲುಪುವ ಮೊದಲೇ ವೈದ್ಯರಿಗೆ ಅವರ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗುವ ಹೊಸ ವ್ಯವಸ್ಥೆಯನ್ನು ರಾಜ್ಯದಲ್ಲಿ ಫೆಬ್ರವರಿಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕಟಿಸಿದರು.
ನಗರದ ನಿಮ್ಹಾನ್ಸ್ (NIMHANS) ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಶರಣ್ ಶ್ರೀನಿವಾಸನ್ ಮತ್ತು ಡಾ. ಪ್ರತಿಭಾ ಶರಣ್ ಅವರ ‘ನ್ಯೂರೋ ಜಸ್ಟೀಸ್’ (Neuro Justice) ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಆರೋಗ್ಯ ಇಲಾಖೆಯ ಕೆಲವು ಅಗತ್ಯ ಸೇವೆಗಳಲ್ಲಿನ ಬಹುಮುಖ್ಯ ಬದಲಾವಣೆಗಳನ್ನು ಪ್ರಸ್ತಾಪಿಸಿದರು. ಅಪಘಾತ ಸಂಭವಿಸಿದಾಗ ‘ಗೋಲ್ಡನ್ ಅವರ್’ನಲ್ಲಿ ಸಿಗುವ ಚಿಕಿತ್ಸೆ ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ರಾಜ್ಯದ ಆರೋಗ್ಯ ಇಲಾಖೆಯು ಆಂಬ್ಯುಲೆನ್ಸ್ ಸೇವೆ ಮತ್ತು ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಆಧುನೀಕರಿಸಲು ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಈ ಹಿಂದೆ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ 108 ಆ್ಯಂಬುಲೆನ್ಸ್ ಸೇವೆಯನ್ನು ಈಗ ಇಲಾಖೆಯೇ ನೇರವಾಗಿ ನಿರ್ವಹಿಸುತ್ತಿದೆ. ಜೊತೆಗೆ ಆಂಬ್ಯುಲೆನ್ಸ್ ಮತ್ತು ಆಸ್ಪತ್ರೆಗಳ ನಡುವೆ ನೇರ ಸಂವಹನ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ಇದರಿಂದ ರೋಗಿ ಆಸ್ಪತ್ರೆ ತಲುಪುವ ಮೊದಲೇ ವೈದ್ಯರಿಗೆ ಅವರ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಿರುತ್ತದೆ ಮತ್ತು ಅವರು ಚಿಕಿತ್ಸೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಈ ಹೊಸ ವ್ಯವಸ್ಥೆಯು ಫೆಬ್ರವರಿಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ. ಇದು ಯಶಸ್ವಿಯಾದಲ್ಲಿ, ಇಡೀ ದೇಶಕ್ಕೇ ಕರ್ನಾಟಕದ ಈ ಮಾದರಿ ದಾರಿದೀಪವಾಗಲಿದೆ ಎಂದರು.
ಅಪಘಾತ ಸೇರಿದಂತೆ ಹಲವು ಕಾರಣಗಳಿಂದ ಆಸ್ಪತ್ರೆ ಸೇರುವ ಜನರ ಸಂಖ್ಯೆ ದೊಡ್ಡದಿದೆ. ಈ ಸಂದರ್ಭದಲ್ಲಿ ಹಲವಾರು ಆರೋಗ್ಯ ವಿಮಾ ಸಂಸ್ಥೆಗಳು ನಾನಾ ಕಾರಣಗಳನ್ನು ನೀಡಿ ಬಿಲ್ ಕ್ಲೈಮ್ ಮಾಡದೆ ವಂಚಿಸುತ್ತಾರೆ. ಈ ರೀತಿ ಆಗಿರುವ ಸಾವಿರಾರು ಪ್ರಕರಣಗಳು ಕೋರ್ಟ್ ಮುಂದಿವೆ. ಹಾಗಾಗಿ ಆರೋಗ್ಯ ವಿಮಾ ಕಂಪನಿಗಳನ್ನು ನಂಬಿಕೊಂಡು ಅವರ ಮಾತಿನಂತೆ ಹಣ ಪಾವತಿಸಿ ವಿಮೆ ಮಾಡಿಸಿಕೊಂಡವರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ತಡೆಯಲು ಈ ‘ನ್ಯೂರೋ ಜಸ್ಟೀಸ್’ ಪುಸ್ತಕ ಸಹಾಯ ಮಾಡುತ್ತದೆ. ಹಾಗಾಗಿ ಇದರ ಬರಹಗಾರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

