ಬೆಂಗಳೂರು: ಭಾನುವಾರ ಬಂತೆಂದರೆ ಸಾಕು, ವಾರಪೂರ್ತಿ ಕೆಲಸ ಮಾಡಿ ದಣಿದ ಜನರಿಗೆ ಕೊಂಚ ವಿಶ್ರಾಂತಿ, ಮನೆಯ ಕೆಲಸ ಅಥವಾ ಟಿವಿ ಮುಂದೆ ಕುಳಿತು ಸಿನಿಮಾ ನೋಡುವ ಆಸೆ ಇರುತ್ತದೆ. ಆದರೆ, ಈ ಭಾನುವಾರ ಬೆಂಗಳೂರಿನ ಪೀಣ್ಯ ಭಾಗದ ಜನರಿಗೆ ಕೆಪಿಟಿಸಿಎಲ್ (KPTCL) ಕೊಂಚ ಶಾಕ್ ನೀಡಿದೆ!
ಪೀಣ್ಯದ 220 ಕೆ.ವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಫೆಬ್ರವರಿ 22 ರಂದು ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ಇಡೀ ದಿನ ವಿದ್ಯುತ್ ಪೂರೈಕೆ ಇರುವುದಿಲ್ಲ.
ಬೆಳಗ್ಗೆಯಿಂದ ಸಂಜೆಯವರೆಗೆ ಪವರ್ ಆಫ್:
ಬೆಳಗ್ಗೆ 9 ಗಂಟೆಗೆ ಸರಿಯಾಗಿ ಸ್ಥಗಿತಗೊಳ್ಳುವ ವಿದ್ಯುತ್ ಸಂಪರ್ಕ, ಸಂಜೆ 5 ಗಂಟೆಯವರೆಗೆ ಪುನರಾರಂಭಗೊಳ್ಳುವುದಿಲ್ಲ. ಅಂದರೆ ಸುಮಾರು 8 ಗಂಟೆಗಳ ಕಾಲ ಜನರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.
ಯಾವೆಲ್ಲಾ ಪ್ರದೇಶಗಳಿಗೆ ಬಿಸಿ?
“ಹೆಚ್, ಎಮ್.ಟಿ ರಸ್ತೆ, ಆರ್ಎನ್ಎಸ್ ಅಪರ್ಟ್ಮೆಂಟ್, ಸಿಎಂಟಿಐ, ಬೋರ್ ಲಿಂಗಪ್ಪ ಗಾರ್ಡನ್, ಪೀಣ್ಯ ಪೊಲೀಸ್ ಠಾಣೆ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್, 6ನೇ ಕ್ರಾಸ್, ರಿಲಯನ್ಸ್ ಕಮ್ಯುನಿಕೇಷನ್, ಗಣಪತಿನಗರ ಮುಖ್ಯ ರಸ್ತೆ, ಪೊಲೀಸ್ ಠಾಣೆ ರಸ್ತೆ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಮೆಕ್ ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, ಕೆಎಚ್ಬಿ ಲೇಔಟ್, ರಾಜೇಶ್ವರಿನಗರ, ಆಕಾಶ್ ಥೀಟರ್ ರಸ್ತೆ, ಫ್ರೆಂಡ್ಸ್ ರ್ಕಲ್, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ. ಭಿರವೇಶ್ವರ ನಗರ, ಬ್ಯಾಂಕ್ ಕಾಲೋನಿ, 6ನೇ ಮುಖ್ಯ ರಸ್ತೆ, ವಿಭಾಗ ರಸ್ತೆ, 5ನೇ ಮುಖ್ಯ ರಸ್ತೆ, ಯುಕೊ ಬ್ಯಾಂಕ್ ರಸ್ತೆ, ಥರ್ಲಾಕ್ ರಸ್ತೆ, 7ನೇ ಮುಖ್ಯ ರಸ್ತೆ, 3ನೇ ಹಂತ, ರಾಜಗೋಪಾಲ ನಗರ, ಕಸ್ತೂರಿ ಬಡವಾನೆ, ಜಿಕೆಡಬ್ಲ್ಯೂ ಲೇಔಟ್, ಬೈರವೇಶ್ವರ ನಗರ, ಇಎಸ್ಐಸಿ ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಕೈಕೊಡಲಿದೆ.
ಸಾರ್ವಜನಿಕರ ಗಮನಕ್ಕೆ:
ನಿರ್ವಹಣಾ ಕೆಲಸಗಳು ತುರ್ತಾಗಿ ಆಗಬೇಕಿರುವುದರಿಂದ ಈ ಕ್ರಮ ಅನಿವಾರ್ಯ ಎಂದು ಬೆಸ್ಕಾಂ ತಿಳಿಸಿದೆ. ಹೀಗಾಗಿ, ಮೊಬೈಲ್ ಚಾರ್ಜಿಂಗ್, ವಾಟರ್ ಹೀಟರ್ ಅಥವಾ ಇತರೆ ವಿದ್ಯುತ್ ಚಾಲಿತ ಕೆಲಸಗಳನ್ನು ಬೆಳಗ್ಗೆ 9 ಗಂಟೆಯ ಒಳಗೆ ಮುಗಿಸಿಕೊಳ್ಳುವುದು ಒಳಿತು. ಒಂದು ವೇಳೆ ಕೆಲಸ ಬೇಗ ಮುಗಿದರೆ ನಿಗದಿತ ಸಮಯಕ್ಕಿಂತ ಮೊದಲೇ ಕರೆಂಟ್ ಬರಬಹುದು! ಯಾವುದಕ್ಕೂ ಮೊದಲೇ ಪ್ಲಾನ್ ಮಾಡಿಕೊಂಡರೆ ಒಳ್ಳೆಯದು.

