ಬೆಂಗಳೂರು: ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ; ಎಲ್ಲ ವರ್ಗದ ಜನರೂ ಕಾಂಗ್ರೆಸ್ ಪಕ್ಷದಿಂದ ದೂರ ಆಗುತ್ತಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಜನರು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಮಾನೋತ್ಸವದ ಪ್ರಯುಕ್ತ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಸಂಜೆ ‘ಅಟಲ್ ದೀಪೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿಗಳ ಚುನಾವಣೆ ನಡೆದಿದ್ದು, ಫಲಿತಾಂಶ ಹೊರಬಿದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 19 ಮತ್ತು 18 ವಾರ್ಡ್‍ಗಳಲ್ಲಿ ಗೆದ್ದಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಬೆಂಗಳೂರು ಗ್ರಾಮಾಂತರದ ಬಾಶೆಟ್ಟಿಹಳ್ಳಿಯಲ್ಲೂ 19ರಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ರಾಯಚೂರಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ ಉಪ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಒಟ್ಟಾರೆಯಾಗಿ ಪಟ್ಟಣ ಪಂಚಾಯಿತಿಯ ಫಲಿತಾಂಶವು ಬಿಜೆಪಿ ಸ್ಪಷ್ಟ ಬಹುಮತ ಪಡೆದುದು ಸಂತೋಷ ಉಂಟಾಗಿದೆ ಎಂದರು.
ಕಾಂಗ್ರೆಸ್ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ; ಎಲ್ಲ ವರ್ಗದ ಜನರೂ ಕಾಂಗ್ರೆಸ್ ಪಕ್ಷದಿಂದ ದೂರ ಆಗುತ್ತಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶದ ಮೂಲಕ ಆ ಭಾಗದ ಜನರು ನೀಡಿದ್ದಾರೆ. ಕಾಂಗ್ರೆಸ್ಸಿನವರು ದೆಹಲಿ, ರಾಜ್ಯದಲ್ಲಿ ಮತ ಚೋರಿ ವಿಚಾರದಲ್ಲಿ ನಾಟಕ ಮಾಡಿದರು. ಅದೆಲ್ಲವನ್ನೂ ಧಿಕ್ಕರಿಸಿ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ. ಕಾಂಗ್ರೆಸ್ ಪಕ್ಷ ಯಾವ ರೀತಿ ಜನರಿಂದ ದೂರವಾಗುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ನುಡಿದರು.
ಜಗತ್ತಿನ ಭೂಪಟದಲ್ಲಿ ಭಾರತದ ಹೆಸರು ಪ್ರಜ್ವಲಿಸುವ ಕೆಲಸ ಮಾಡಿದ ವಾಜಪೇಯಿ:
ಅಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು, ಕವಿಹೃದಯಿ, ರಾಜಕೀಯ ತಜ್ಞರು ಎಂದು ತಿಳಿಸಿದರು. ಇಂದು ದೇಶಾದ್ಯಂತ ಮತ್ತು ಕರ್ನಾಟಕದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ದೀಪ ಪ್ರಜ್ವಲನೆ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಲಾಗುತ್ತಿದೆ. ಅವರ ಆಡಳಿತ ಅವಧಿಯಲ್ಲಿ ಯಾವ ರೀತಿ ದೇಶ ಮುನ್ನಡೆಸುವ ಕಾರ್ಯ ಮಾಡಿದ್ದಾರೆಂಬುದು ನಮಗೆಲ್ಲ ತಿಳಿದಿದೆ. ಹಿಂದೆಂದೂ ಕಾಣದ ಸ್ವರ್ಣ ಚತುಷ್ಪಥ ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನ, ಪೋಖ್ರಾನ್ ಮೊದಲಾದವುಗಳಿಂದ ಜಗತ್ತಿನ ಭೂಪಟದಲ್ಲಿ ಭಾರತವನ್ನು ಪ್ರಜ್ವಲಿಸುವ ಕೆಲಸವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ್ದಾರೆ ಎಂದು ವಿಜಯೇಂದ್ರ ವಿವರಿಸಿದರು.

