ಬೆಳಗಾವಿ: ನ್ಯಾ.ಕುನ್ಹಾ ಅವರ ಸಮಿತಿಯ ಶಿಫಾರಸ್ಸುಗಳನ್ನು ಗೌರವಿಸಿ, ಷರತ್ತುಗಳನ್ನು ಒಪ್ಪಿಕೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟಕ್ಕೆ ಅನುಮತಿ ನೀಡುವ ನಿರ್ಧಾರ ಮಾಡಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದೇವೆ, “ಬೆಂಗಳೂರಿನ ಗೌರವ ಉಳಿಸಲು ನಾವು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಮುಂದೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದೇವೆ” ಎಂದು ತಿಳಿಸಿದರು.
“ಕ್ರಿಕಟ್ ಪಂದ್ಯಗಳ ಆಯೋಜನೆ ವಿಚಾರದಲ್ಲಿ ನ್ಯಾ. ಕುನ್ಹಾ ಅವರ ಸಮಿತಿಯ ಶಿಫಾರಸ್ಸುಗಳನ್ನು ಗೌರವಿಸಬೇಕು.ಅಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಜವಾಬ್ದಾರಿಯನ್ನು ಗೃಹ ಸಚಿವ ಪರಮೇಶ್ವರ್ ಅವರಿಗೆ ವಹಿಸಲಾಗಿದೆ. ಗೃಹ ಸಚಿವರು ಕೆಎಸ್ ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಕೂತು ಯಾವ ರೀತಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎನ್ನುವ ಕುರಿತು ಚರ್ಚೆ ಮಾಡಲಿದ್ದಾರೆ” ಎಂದು ತಿಳಿಸಿದರು.
ಮತ ಕಳ್ಳತನ ವಿರುದ್ಧ ಪ್ರತಿಭಟನೆಗಾಗಿ ದೆಹಲಿಗೆ ಪ್ರಯಾಣ:
“ಮತ ಕಳ್ಳತನ ವಿರುದ್ಧದ ಹೋರಾಟದಲ್ಲಿ ಭಾಗವಹಿಸಲು ಶನಿವಾರ ದೆಹಲಿಗೆ ತೆರಳುತ್ತಿದ್ದೇನೆ. ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲೇ ಮತ ಕಳ್ಳತನ ವಿರುದ್ಧ ಹೋರಾಟ ಆರಂಭಿಸಿದರು. ನಾವು 2023ರಲ್ಲೇ ಚಿಲುಮೆ ಅಕ್ರಮದ ಮೂಲಕ ಮತ ಕಳ್ಳತನವನ್ನು ಪತ್ತೆ ಮಾಡಿದ್ದೆವು. ನಾನು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರೆಲ್ಲರೂ ಚುನಾವಣಾ ಆಯೋಗಕ್ಕೆ ದೂರು ನೀಡಿ ಹೋರಾಟ ಮಾಡಿದೆವು. ನಂತರ ನಾವು ವಿಧಾನಸಭೆ ಚುನಾವಣೆಯಲ್ಲಿ ಗೆದ್ದೆವು. ಲೋಕಸಭೆ ಚುನಾವಣೆ ಸಮಯದಲ್ಲಿ ಆಗಿರುವ ಮತ ಕಳ್ಳತನವನ್ನು ರಾಹುಲ್ ಗಾಂಧಿ ಅವರು ಸಾಕ್ಷಿ ಸಮೇತ ಜನರ ಮುಂದಿಟ್ಟಿದ್ದಾರೆ. ಚುನಾವಣಾ ಆಯೋಗವು ನಿರ್ದಿಷ್ಟ ರಾಜಕೀಯ ಪಕ್ಷದ ಅಸ್ತ್ರವಾಗಿದ್ದು, ನಾವು ಅದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರವಾಗಿ ರಾಜ್ಯದಲ್ಲಿ ನಡೆಸಿದ ಸಹಿ ಸಂಗ್ರಹ ಅಭಿಯಾನದಲ್ಲಿ 1.43 ಕೋಟಿ ಸಹಿ ಸಂಗ್ರಹವಾಗಿದ್ದು, ಎಲ್ಲಾ ಕಾರ್ಯಕರ್ತರು ಹಾಗೂ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

