ಬೆಂಗಳೂರು: ಸ್ನಾತಕೋತ್ತರ ಆಯುಷ್ (ಪಿಜಿ ಆಯುಷ್) ಕೋರ್ಸ್ ಗಳ ಪ್ರವೇಶ ಸಂಬಂಧ ಎರಡನೇ ಸುತ್ತಿನ ಸೀಟು ಹಂಚಿಕೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ಇಂದಿನಿಂದ ಆರಂಭವಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ಬದಲಾಯಿಸಿಕೊಳ್ಳಲು ನ.26ರಂದು ಬೆಳಿಗ್ಗೆ 9 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ನ.26ರಂದು ಸಂಜೆ 4ಗಂಟೆಗೆ ತಾತ್ಕಾಲಿಕ ಫಲಿತಾಂಶ ಹಾಗೂ ನ.27ರಂದು ಬೆಳಿಗ್ಗೆ 11ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಸೀಟು ಹಂಚಿಕೆಯಾದವರು ನ.28ರಿಂದ 29ರವರೆಗೆ ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ನ.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ಸೇವಾ ನಿರತರಿಗೆ ಪಿಜಿ ಮೆಡಿಕಲ್:
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಸಲುವಾಗಿ ಸೇವಾ ನಿರತ (In service) ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಇಂದಿನಿಂದ ಲಿಂಕ್ ಬಿಡುಗಡೆ ಮಾಡಲಾಗಿದೆ. ನ.26ರಂದು ಬೆಳಿಗ್ಗೆ 10 ಗಂಟೆವರೆಗೆ ಇಚ್ಛೆ ದಾಖಲಿಸಬಹುದು. ನ.26ರಂದು ಮಧ್ಯಾಹ್ನ 12 ಗಂಟೆ ನಂತರ ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. ನ.27ರ ಬೆಳಿಗ್ಗೆ 11 ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ಅದಲು-ಬದಲು ಮಾಡಿಕೊಳ್ಳಲು ಅವಕಾಶ ಇರುತ್ತದೆ. ನ.27ರಂದು ಸಂಜೆ 4 ಗಂಟೆ ನಂತರ ತಾತ್ಕಾಲಿಕ ಫಲಿತಾಂಶ ಹಾಗೂ ನ.28ರಂದು ಬೆಳಿಗ್ಗೆ 11 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ವಿವರಗಳಿಗೆ ವೆಬ್ ಸೈಟ್ ನೋಡಿ ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

