ಮೈಸೂರು: ರಾಜ್ಯ ರಾಜಕೀಯದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದ್ದು, “ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ಚಟುವಟಿಕೆಗಳು ನಡೆಯುತ್ತಿದ್ದವು ಮತ್ತು ಈಗಲೂ ನಡೆಯುತ್ತಿವೆ,” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಎಂಬುದು ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದೆ ಎಂಬ ಸತ್ಯವನ್ನು ಬಹಿರಂಗಪಡಿಸಿದರು. “ನಾನು ಈ ವಿಚಾರದಲ್ಲಿ ಸುಳ್ಳು ಹೇಳುವುದಿಲ್ಲ. ಹಿಂದೆ ಇದ್ದ ಸರ್ಕಾರಗಳಲ್ಲೂ ಇದು ಇತ್ತು, ಈಗಿನ ಸರ್ಕಾರದಲ್ಲೂ ಕದ್ದಾಲಿಕೆ ಮುಂದುವರಿದಿದೆ. ಆದರೆ ಈಗಿನ ವ್ಯತ್ಯಾಸವೆಂದರೆ ವಿರೋಧ ಪಕ್ಷದವರಿಗಿಂತ ಹೆಚ್ಚಾಗಿ ಸ್ವಪಕ್ಷದವರ ಮೇಲೆ ನಿಗಾ ಇಡಲಾಗುತ್ತಿದೆ,” ಎಂದು ಅವರು ಲೇವಡಿ ಮಾಡಿದರು.
ಸ್ವಪಕ್ಷೀಯರ ಮೇಲೆ ನಿಗಾ:
“ಪ್ರಸ್ತುತ ಸರ್ಕಾರದಲ್ಲಿ ತಮ್ಮದೇ ಶಾಸಕರು ಮತ್ತು ಸಚಿವರು ಏನು ಮಾಡುತ್ತಿದ್ದಾರೆ? ಯಾರ ಜೊತೆ ಮಾತನಾಡುತ್ತಿದ್ದಾರೆ? ಎಂಬುದನ್ನು ತಿಳಿಯಲು ಸರ್ಕಾರವೇ ಕದ್ದಾಲಿಕೆಗೆ ಮೊರೆ ಹೋಗಿದೆ. ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕಣ್ಣಿಟ್ಟಿರುವವರು ತಮ್ಮದೇ ಪಕ್ಷದವರ ಚಟುವಟಿಕೆಗಳ ಮೇಲೆ ಕಣ್ಣಿಡುತ್ತಿದ್ದಾರೆ. ಫೋನ್ ಟ್ಯಾಪಿಂಗ್ ಮಾಡಿಯೂ ಏನೂ ತಿಳಿಯದವರಂತೆ ಕೆಲವರು ‘ಪತಿವ್ರತೆ’ಯಂತೆ ವರ್ತಿಸುತ್ತಿರುವುದು ಹಾಸ್ಯಾಸ್ಪದ,” ಎಂದು ಅವರು ಯಾರ ಹೆಸರನ್ನೂ ಉಲ್ಲೇಖಿಸದೆ ಕುಟುಕಿದರು.
ಹಿಂದಿನ ಸರ್ಕಾರಗಳ ಅವಧಿಯಲ್ಲಿ ಈ ಕುರಿತು ತನಿಖೆಗಳಾದ ಉದಾಹರಣೆಗಳನ್ನು ನೆನಪಿಸಿದ ಸಚಿವರು, ಅಧಿಕಾರ ಉಳಿಸಿಕೊಳ್ಳಲು ಅಥವಾ ಅತೃಪ್ತರ ಮೇಲೆ ನಿಗಾ ಇಡಲು ಈ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಕುಮಾರಸ್ವಾಮಿ ಅವರ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಪಕ್ಷದ ನಾಯಕರ ಮುಂದಿನ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.
ಕೊಲ್ಲಿ ರಾಷ್ಟ್ರಗಳಿಂದ ಕನ್ನಡಿಗರ ಸುರಕ್ಷಿತ ವಾಪಸಾತಿ: ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಲ್ಲಿ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗ ಹಾಗೂ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಕೊಲ್ಲಿ ಪ್ರದೇಶದ ಉದ್ವಿಗ್ನತೆಯಿಂದ ಆತಂಕಕ್ಕೆ ಒಳಗಾಗಿರುವ ಕುಟುಂಬಗಳಿಗೆ ಧೈರ್ಯ ತುಂಬಿದರು. “ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಹಿಂದೆಯೂ ಇಂತಹ ಅನೇಕ ಸಂಕಷ್ಟದ ಸಂದರ್ಭಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ. ಉಕ್ರೇನ್ ಸೇರಿದಂತೆ ವಿವಿಧ ಯುದ್ಧಪೀಡಿತ ದೇಶಗಳಿಂದ ಸಾವಿರಾರು ಭಾರತೀಯರನ್ನು ಏರ್‌ಲಿಫ್ಟ್ ಮಾಡಿದ ಇತಿಹಾಸ ನಮ್ಮ ಮುಂದಿದೆ. ಈ ಬಾರಿಯೂ ಅದೇ ಸಂಕಲ್ಪದೊಂದಿಗೆ ಪ್ರಧಾನಿಗಳು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ,” ಎಂದು ಅವರು ತಿಳಿಸಿದರು.
ಕನ್ನಡಿಗರೊಂದಿಗೆ ನಿರಂತರ ಸಂಪರ್ಕ:
“ನಾನು ವೈಯಕ್ತಿಕವಾಗಿ ದುಬೈ ಸೇರಿದಂತೆ ಯುದ್ಧ ಕಾರ್ಮೋಡ ಕವಿದಿರುವ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಸಂಪರ್ಕಿಸಿದ್ದೇನೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಪ್ರಸ್ತುತ ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊರಲಿದೆ,” ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಈಗಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಕ್ಷಣಾ ಕಾರ್ಯದ ಕುರಿತು ನೀಲನಕ್ಷೆ ಸಿದ್ಧಪಡಿಸಿದ್ದು, ಹಂತ-ಹಂತವಾಗಿ ಎಲ್ಲರನ್ನೂ ವಾಪಸ್ ಕರೆತರಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು

