ಬೆಂಗಳೂರು: “ರಾಜಧಾನಿಯ ರಸ್ತೆ ಗುಂಡಿಗಳ ಸಮಸ್ಯೆ ಹಾಗೂ ಮಳೆಗಾಲದ ಅವಾಂತರಗಳಿಗೆ ಬ್ರೇಕ್ ಹಾಕಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಈಗ ಯುದ್ಧೋಪಾದಿಯಲ್ಲಿ ಸಜ್ಜಾಗಿದೆ. ಕೇವಲ ಕಡತಗಳಲ್ಲಿ ಮಾತ್ರವಲ್ಲದೆ, ವಾಸ್ತವದಲ್ಲಿ ಕಾಮಗಾರಿಗಳು ವೇಗ ಪಡೆಯಬೇಕು ಎಂದು ಖಡಕ್ ಸೂಚನೆ ನೀಡಿರುವ ಆಯುಕ್ತ ರಾಜೇಂದ್ರ ಚೋಳನ್, ನಗರದ ಸಂಚಾರ ವ್ಯವಸ್ಥೆ ಹಾಗೂ ಪಾದಚಾರಿಗಳ ಸುರಕ್ಷತೆಗೆ ಹೊಸ ವೇಗ ನೀಡಲು ಮುಂದಾಗಿದ್ದಾರೆ. ಎಂ.ಜಿ. ರಸ್ತೆಯ ಡಾಂಬರೀಕರಣದಿಂದ ಹಿಡಿದು ಜಂಕ್ಷನ್‌ಗಳ ಅಭಿವೃದ್ಧಿವರೆಗೆ ಮಹತ್ವದ ಬದಲಾವಣೆಗಳಿಗೆ ಪಾಲಿಕೆ ಮುಹೂರ್ತ ನಿಗದಿಪಡಿಸಿದೆ.
ನಗರದ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು ಇಂಜಿನಿಯರ್‌ಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಮುಂಬರುವ ಮಾನ್ಸೂನ್ ಕಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು. ನಗರದಲ್ಲಿ ನೀರು ನಿಲ್ಲುವ ತಗ್ಗು ಪ್ರದೇಶಗಳನ್ನು ಕೂಡಲೇ ಗುರುತಿಸಿ, ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಸ್ತೆ ಕಾಮಗಾರಿಗಳಿಗೆ ಆದ್ಯತೆ:
ದುರಸ್ಥಿಯಲ್ಲಿರುವ ನಗರದ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ (Arterial & Sub-Arterial Roads) ಪಟ್ಟಿಯನ್ನು ಸಿದ್ಧಪಡಿಸಿ, ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಆಯುಕ್ತರು ಸೂಚಿಸಿದರು. ವಿಶೇಷವಾಗಿ ಎಂ.ಜಿ ರಸ್ತೆಯಲ್ಲಿ ಪ್ರಗತಿಯಲ್ಲಿರುವ ಡಾಂಬರೀಕರಣ ಕಾಮಗಾರಿಯನ್ನು ಅತ್ಯಂತ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಅವರು ಕಟ್ಟುನಿಟ್ಟಿನ ಆದೇಶ ನೀಡಿದರು.
ಸಮನ್ವಯಕ್ಕೆ ಸೂಚನೆ:
ಜಲಮಂಡಳಿ (BWSSB) ವತಿಯಿಂದ ಪೈಪ್‌ಲೈನ್ ಅಳವಡಿಕೆಗಾಗಿ ಅಗೆಯಲಾದ ರಸ್ತೆಗಳನ್ನು ಹಾಗೆಯೇ ಬಿಡದೆ, ಕೂಡಲೇ ಸುಸ್ಥಿತಿಗೆ ತರಬೇಕು. ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಅಗತ್ಯವಿರುವ ಕಡೆಗಳಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಕಾಮಗಾರಿಗಳ ಕಾಲಮಿತಿ ಮತ್ತು ನಿರ್ದಿಷ್ಟ ಕ್ರಮಗಳು:
ಎಂ.ಜಿ. ರಸ್ತೆ ಆಸ್ಫಾಲ್ಟಿಂಗ್ (ಡಾಂಬರೀಕರಣ): ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗಿನ ಸುಮಾರು 2 ಕಿ.ಮೀ ಉದ್ದದ ರಸ್ತೆಯ ಮರು ಡಾಂಬರೀಕರಣಕ್ಕೆ ಸಂಚಾರ ಪೊಲೀಸರಿಂದ ಅನುಮತಿ ದೊರೆತಿದ್ದು, ಈ ಕಾರ್ಯವನ್ನು 15 ದಿನಗಳೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಯಿತು.
BWSSB ಮತ್ತು ಸಮನ್ವಯ: ಜಲಮಂಡಳಿಯು ಎಂ.ಜಿ. ರಸ್ತೆಯಲ್ಲಿ ಸುಮಾರು 40 ವರ್ಷ ಹಳೆಯದಾದ ಕೊಳವೆಗಳನ್ನು ಬದಲಿಸಲು ರಸ್ತೆ ಅಗೆಯುವ ಸಾಧ್ಯತೆ ಇದ್ದು, ಕಾಮಗಾರಿ ಮುಗಿದ ಕೂಡಲೇ ರಸ್ತೆ ಪುನಃಸ್ಥಾಪನೆ (Restoration) ಮಾಡಲು ಸಮನ್ವಯ ಸಮಿತಿಯ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ವೈಟ್-ಟಾಪಿಂಗ್ ವೇಗವರ್ಧನೆ: ನಾರಾಯಣ ಪಿಳ್ಳೈ ರಸ್ತೆ ಮತ್ತು ಸೇಂಟ್ ಜಾನ್ ಚರ್ಚ್ ರಸ್ತೆಗಳಲ್ಲಿ ನಡೆಯುತ್ತಿರುವ ವೈಟ್-ಟಾಪಿಂಗ್ ಕಾಮಗಾರಿಗಳನ್ನು ತ್ವರಿತಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಲು ಆಯುಕ್ತರು ಸೂಚಿಸಿದ್ದಾರೆ.
ಮಳೆಗಾಲದ ಮುನ್ನೆಚ್ಚರಿಕೆ: ಮಳೆನೀರು ಸುಗಮವಾಗಿ ಹರಿಯಲು ರಸ್ತೆ ಬದಿಯ ಚರಂಡಿಗಳ (Gratings) ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಇಂಜಿನಿಯರ್‌ಗಳಿಗೆ ನಿರ್ದೇಶಿಸಲಾಯಿತು.
ಕಪ್ಪು ಚುಕ್ಕೆಗಳ ನಿರ್ಮೂಲನೆ: ವಾರ್ಡ್‌ವಾರು ‘ಬ್ಲಾಕ್ ಸ್ಪಾಟ್’ಗಳನ್ನು (ಕಸ ಸುರಿಯುವ ಜಾಗ) ಗುರುತಿಸಿ ಅವುಗಳನ್ನು ಸೌಂದರ್ಯೀಕರಣಗೊಳಿಸುವ ಮೂಲಕ ಶುಚಿತ್ವಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಯಿತು.
ಇತರ ಪ್ರಮುಖ ನಿರ್ಣಯಗಳು:
ಮಾದರಿ ರಸ್ತೆಗಳು: ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಸೈಕಲ್ ಟ್ರ್ಯಾಕ್ ಮತ್ತು ಫುಟ್‌ಪಾತ್ ಹೊಂದಿರುವ ಮಾದರಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.
ಕ್ರೀಡಾಂಗಣಗಳ ಅಭಿವೃದ್ಧಿ: ಪಾಲಿಕೆ ವ್ಯಾಪ್ತಿಯ ಶಾಲೆ ಮತ್ತು ಕಾಲೇಜು ಮೈದಾನಗಳನ್ನು ಪಟ್ಟಿ ಮಾಡಿ, ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸಲಾಗುವುದು ಎನ್ನುವ ನಿರ್ಧಾರ ಮಾಡಲಾಯಿತು.
ಸಭೆಯಲ್ಲಿ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಅಧೀಕ್ಷಕ ಇಂಜಿನಿಯರ್‌ಗಳಾದ ಪುನೀತ್, ಚಂದ್ರಶೇಖರ್ ಹಾಗೂ ಕಾರ್ಯಪಾಲಕ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.

