Sat. Mar 14th, 2026

ಫ್ಲಿಪ್‌ಕಾರ್ಟ್ ವಿರುದ್ಧ ಪ್ರಧಾನಿ ಮೋದಿ, ಸಿಐಐಗೆ ದೂರು: ₹1ಕ್ಕೆ ಹಾಲು ಮಾರಾಟಕ್ಕೆ ‘ಬಮೂಲ್’ ಆಕ್ಷೇಪ

Share this with Friends

ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾದ ಫ್ಲಿಪ್‌ಕಾರ್ಟ್ (Flipkart) ಅನುಸರಿಸುತ್ತಿರುವ ವಿವಾದಾತ್ಮಕ ಮಾರುಕಟ್ಟೆ ನೀತಿಯ ವಿರುದ್ಧ ಇದೀಗ ರೈತ ಸಂಘಟನೆಗಳು ಮತ್ತು ಹಾಲು ಒಕ್ಕೂಟಗಳು ತಿರುಗಿಬಿದ್ದಿವೆ. ಫ್ಲಿಪ್‌ಕಾರ್ಟ್‌ನ ‘ಕ್ವಿಕ್ ಕಾಮರ್ಸ್’ ವಿಭಾಗವಾದ ‘ಫ್ಲಿಪ್‌ಕಾರ್ಟ್ ಮಿನಿಟ್ಸ್’ (Flipkart Minutes) ಕೇವಲ ₹1ಕ್ಕೆ ಅರ್ಧ ಲೀಟರ್ ಹಾಲು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಪ್ರಧಾನಿ ನರೇಂದ್ರ ಮೋದಿ ಹಾಗು ಸಿಐಐಗೆ ಪತ್ರ ಬರೆದು ದೂರು ಸಲ್ಲಿಸಿದೆ.

ರೈತರಿಗೆ ಮಾರಕವಾದ ‘ರಿಯಾಯಿತಿ ಸಮರ’:

ಫ್ಲಿಪ್‌ಕಾರ್ಟ್ ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಅತಿಯಾದ ರಿಯಾಯಿತಿ (Deep Discounting) ನೀಡುತ್ತಿದ್ದು, ಇದು ಡೈರಿ ಉದ್ದಿಮೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಬಮೂಲ್ ಅಧ್ಯಕ್ಷರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. “₹1ಕ್ಕೆ ಹಾಲು ನೀಡುವುದು ಮಾರುಕಟ್ಟೆಯ ಆರೋಗ್ಯಕರ ಸ್ಪರ್ಧೆಯನ್ನು ಹಾಳುಗೆಡವುತ್ತದೆ. ಇದು ನಮ್ಮ ದೇಶದ ಸಹಕಾರಿ ಸಂಸ್ಥೆಗಳಾದ ‘ನಂದಿನಿ’ಯ ಅಸ್ತಿತ್ವಕ್ಕೆ ಧಕ್ಕೆ ತರಲಿದ್ದು, ಅಂತಿಮವಾಗಿ ಲಕ್ಷಾಂತರ ಹಾಲು ಉತ್ಪಾದಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ” ಎಂದು ಅವರು ವಿವರಿಸಿದ್ದಾರೆ.

ಸಿಸಿಐ ಮೆಟ್ಟಿಲೇರಿದ ಬಾಮೂಲ್: ಫ್ಲಿಪ್‌ಕಾರ್ಟ್ ವಿರುದ್ಧ ತನಿಖೆಗೆ ಆಗ್ರಹ

ಇನ್ನು ಫ್ಲಿಪ್‌ಕಾರ್ಟ್‌ನ ಅತಿಯಾದ ರಿಯಾಯಿತಿ ಮಾರಾಟ ನೀತಿಯ ವಿರುದ್ಧ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಭಾರತೀಯ ಸ್ಪರ್ಧಾ ಆಯೋಗಕ್ಕೂ (CCI) ದೂರು ಸಲ್ಲಿಸಿದೆ. ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಹಾಳುಗೆಡವುತ್ತಿರುವ ಫ್ಲಿಪ್‌ಕಾರ್ಟ್ ಮಿನಿಟ್ಸ್ (Flipkart Minutes) ವಿರುದ್ಧ ಕೂಡಲೇ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ದೂರಿನಲ್ಲಿರುವ ಪ್ರಮುಖ ಅಂಶಗಳು:

ಪ್ರೆಡೇಟರಿ ಪ್ರೈಸಿಂಗ್ (Predatory Pricing): ಫ್ಲಿಪ್‌ಕಾರ್ಟ್ ಸಂಸ್ಥೆಯು ₹1ಕ್ಕೆ ಅರ್ಧ ಲೀಟರ್ ಹಾಲು ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯ ನೈಜ ಬೆಲೆಗಿಂತ ತೀರಾ ಕಡಿಮೆಯಾಗಿದೆ. ಇದು ಸಣ್ಣ ವ್ಯಾಪಾರಿಗಳನ್ನು ಮತ್ತು ಸಹಕಾರಿ ಸಂಘಗಳನ್ನು ಮಾರುಕಟ್ಟೆಯಿಂದ ಹೊರಹಾಕುವ ಕುತಂತ್ರ ಎಂದು ಬಮೂಲ್ ಆರೋಪಿಸಿದೆ.

ಸ್ಪರ್ಧಾ ಕಾಯ್ದೆ ಉಲ್ಲಂಘನೆ: 2002ರ ಸ್ಪರ್ಧಾ ಕಾಯ್ದೆಯ ಅಡಿಯಲ್ಲಿ, ಯಾವುದೇ ಕಂಪನಿಯು ತನ್ನ ಮಾರುಕಟ್ಟೆಯ ಪ್ರಾಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಬೆಲೆಗಳನ್ನು ಅಸಹಜವಾಗಿ ಇಳಿಸುವಂತಿಲ್ಲ. ಫ್ಲಿಪ್‌ಕಾರ್ಟ್ ಈ ನಿಯಮವನ್ನು ನೇರವಾಗಿ ಉಲ್ಲಂಘಿಸುತ್ತಿದೆ ಎಂದು ಸಿಸಿಐ ಗಮನಕ್ಕೆ ತರಲಾಗಿದೆ.

ನಂದಿನಿ ಅಸ್ತಿತ್ವಕ್ಕೆ ಧಕ್ಕೆ: ಕರ್ನಾಟಕದ ಹೆಮ್ಮೆಯ ‘ನಂದಿನಿ’ ಬ್ರ್ಯಾಂಡ್ ಮತ್ತು ಲಕ್ಷಾಂತರ ರೈತರ ಜೀವನೋಪಾಯಕ್ಕೆ ಈ ‘ದರ ಸಮರ’ ಮಾರಕವಾಗಿದೆ. ಇ-ಕಾಮರ್ಸ್ ದೈತ್ಯ ಸಂಸ್ಥೆಗಳ ಇಂತಹ ನಡೆಗಳಿಂದಾಗಿ ಹೈನುಗಾರಿಕೆ ನಂಬಿರುವ ಗ್ರಾಮೀಣ ಆರ್ಥಿಕತೆ ಕುಸಿಯುವ ಭೀತಿ ಇದೆ ಎಂದು ಬಮೂಲ್ ಆತಂಕ ವ್ಯಕ್ತಪಡಿಸಿದೆ.

ತನಿಖೆಗೆ ಒತ್ತಾಯ:

ಈಗಾಗಲೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ಸಿಸಿಐ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಬಮೂಲ್ ನೀಡಿರುವ ಈ ಹೊಸ ದೂರು ಇ-ಕಾಮರ್ಸ್ ಸಂಸ್ಥೆಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಯತ್ನಿಸುತ್ತಿರುವ ಇಂತಹ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ‘ರಿಯಾಯಿತಿ ದರ’ದ ಹಿಂದಿನ ಹೂಡಿಕೆಯ ಮೂಲವನ್ನು ಪತ್ತೆಹಚ್ಚಬೇಕು ಎಂದು ಸಿಸಿಐಗೆ ಕೋರಲಾಗಿದೆ.


Share this with Friends

Related Post