ನವದೆಹಲಿ.ಎ.1 : ಕಚ್ಚತೀವು ವಿಷಯದ ಕುರಿತು ಹೊರಹೊಮ್ಮುತ್ತಿರುವ ಹೊಸ ವಿವರಗಳು ಡಿಎಂಕೆಯ ದ್ವಂದ್ವ ನೀತಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿವೆ ಎಂದು ಮೋದಿ ಆರೋಪಿಸಿದ್ದಾರೆ. ಕಚ್ಚತೀವು ದ್ವೀಪ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದು ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
1974 ರಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಅದರ ಅಡಿಯಲ್ಲಿ ಕಚ್ಚತೀವು ದ್ವೀಪವನ್ನು ಅಂದಿನ ಕಾಂಗ್ರೆಸ್ ಸರ್ಕಾರವು ಶ್ರೀಲಂಕಾಕ್ಕೆ ನೀಡಿತು. ಈ ವಿಷಯದ ಬಗ್ಗೆ ಅಂದಿನ ರಾಜ್ಯದ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು ಮತ್ತು ಡಿಎಂಕೆ ಒಪ್ಪಂದದ ವಿರುದ್ಧ ಸಾರ್ವಜನಿಕ ನಿಲುವು ವ್ಯಕ್ತಪಡಿಸಿದ ಹೊರತಾಗಿಯೂ ಒಪ್ಪಂದಕ್ಕೆ ಒಪ್ಪಿಗೆ ನೀಡಿತ್ತಯ ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಡಿಎಂಕೆಯ ಕುಟುಂಬ ರಾಜಕಾರಣದಡಿ ಅವರು ತಮ್ಮ ಸ್ವಂತ ಪುತ್ರ ಮತ್ತು ಪುತ್ರಿಯರು ಬೆಳೆಯಲು ಮಾತ್ರ ಕಾಳಜಿ ವಹಿಸುತ್ತಾರೆ ಎಂದು ಆರೋಪಿಸಿದ ಮೋದಿ, ಕಚ್ಚತೀವು ಮೇಲಿನ ಈ ಪಕ್ಷಗಳ ನಿರ್ದಾಕ್ಷಿಣ್ಯತೆಯು ವಿಶೇಷವಾಗಿ ಬಡ ಮೀನುಗಾರರು ಮತ್ತು ಮೀನುಗಾರ ಮಹಿಳೆಯರ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದರು.