ನವದೆಹಲಿ, ಫೆ.23: ಪಿಎಂ ಸೂರ್ಯ ಘರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು,ದೇಶಾದ್ಯಂತ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗುವ ಗುರಿಯನ್ನು ಈ ಯೋಜನೆ ಹೊಂದಿದೆ.
ಅರ್ಜಿ ಸಲ್ಲಿಕೆ ಮಾಡಿದ 30 ದಿನದ ಒಳಗೆ ಸಬ್ಸಿಡಿ ಮೊತ್ತವನ್ನು ಯೋಜನೆಗೆ ಸೇರುವವರ ಖಾತೆಗೆ ಕೇಂದ್ರ ಸರ್ಕಾರ ನೇರವಾಗಿ ವರ್ಗಾಯಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಸೂರ್ಯೋದಯ ಯೋಜನೆಗೇ ಇತ್ತೀಚೆಗೆ ಮರುನಾಮಕರಣ ಮಾಡಲಾಗಿದ್ದು, ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಎಂದು ಘೋಷಿಸಲಾಗಿದೆ.
ಮನೆಯ ಮೇಲ್ಛಾವಣಿಯ ಸೌರಶಕ್ತಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸುಮಾರು ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ದೊರೆಯಲಿದೆ.
ಕೇಂದ್ರ ಸರ್ಕಾರ ಈ ಯೋಜನೆಯ ಫಲಾನುಭವಿಗಳಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಸಬ್ಸಿಡಿಯನ್ನು ನೀಡಲು ಮುಂದಾಗಿದೆ, ಜೊತೆಗೆ ಹೆಚ್ಚಿನ ರಿಯಾಯಿತಿಯಲ್ಲಿ ಏಕೀಕೃತ ಬ್ಯಾಂಕ್ ಸಾಲವನ್ನು ನೀಡಲು ಮುಂದಾಗಿದೆ. ಎಲ್ಲ ಸ್ಟಾಕ್ ಹೋಲ್ಡರ್‌ಗಳನ್ನು ಏಕೀಕೃತ ರಾಷ್ಟ್ರೀಯ ಆನ್‌ಲೈನ್ ಪೋರ್ಟಲ್‌ನಲ್ಲಿ ಕೇಂದ್ರಿಕರಿಸಿದ್ದು, ಜನರಿಗೆ ಇದರಿಂದ ಅನುಕೂಲವಾಗಲಿದೆ.
ಯೋಜನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಿಗೆ ತಮ್ಮ ಪ್ರದೇಶದಲ್ಲಿ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು.
ಜೊತೆಗೆ ಈ ಯೋಜನೆಯು ಆದಾಯವನ್ನು ಹೆಚ್ಚಿಸುವ, ವಿದ್ಯುತ್ ಬಿಲ್ ಕಡಿಮೆ ಮಾಡುವ ಮತ್ತು ಉದ್ಯೋಗಾಕಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ಮೂರು ರೀತಿಯ ಸಬ್ಸಿಡಿಯನ್ನು ಈ ಯೋಜನೆಯಲ್ಲಿ ನೀಡುತ್ತಿದ್ದು,150 ಯೂನಿಟ್‌ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 30 ಸಾವಿರ ರೂ.ನಿಂದ 60 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.
150 ರಿಂದ 300 ಯೂನಿಟ್‌ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 60 ಸಾವಿರ ರೂ.ನಿಂದ 78 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.
300 ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ 3ಕ್ಕಿಂತ ಹೆಚ್ಚು ಕಿಲೋ ವ್ಯಾಟ್ ಘಟಕ ಅಗತ್ಯ ಇದ್ದು 78 ಸಾವಿರ ರೂ. ಸಬ್ಸಿಡಿ ಸಿಗಲಿದೆ.
ಪಿಎಂ ಸೂರ್ಯ ಘರ್ : ಮುಫ್ತ್ ಬಿಜ್ಲಿ ಯೋಜನೆಗೆ http://pmsuryaghar.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ-:
ಕೆಳಗಿನ ಅಂಶಗಳನ್ನು ನಮೂದಿಸಿ
ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ
ನಿಮ್ಮ ವಿದ್ಯುತ್ ಸರಬರಾಜು ಕಂಪನಿ ಆಯ್ಕೆ ಮಾಡಿಕೊಳ್ಳಿ
ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆ ಹಾಗೂ
ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಇಮೇಲ್ ಹಾಕಿ
ಬಳಿಕ ಪೋರ್ಟಲ್‌ನಲ್ಲಿ ತಿಳಿಸಿದಂತೆ ಮುಂದುವರಿಯಿರಿ.
ನಿಮ್ಮ ವಿದ್ಯುತ್ ಬಿಲ್ ಗ್ರಾಹಕರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಬಳಿಕ ಸೋಲಾರ್ ರೂಫ್‌ಟಾಫ್ ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ
ನಿಮ್ಮ ಅರ್ಜಿಯನ್ನು ನಿಮ್ಮ ಎಸ್ಕಾಂ ಕಾರ್ಯಸಾಧ್ಯತಾ ಅನುಮೋದನೆ ನೀಡುವವರೆಗೂ ಕಾಯಿರಿ. ಅನುಮೋದನೆ ಸಿಕ್ಕ ಬಳಿಕ ಎಸ್ಕಾಂನಿಂದ ಅನುಮೋದಿಸಲ್ಪಟ್ಟ ನೋಂದಾಯಿತ ವೆಂಡರ್‌ಗಳು ಸೋಲಾರ್ ಅನ್ನು ಇನ್‌ಸ್ಟಾಲ್ ಮಾಡಲಿದ್ದಾರೆ.
ಸೋಲಾರ್ ರೂಪ್‌ಟಾಪ್ ಇನ್‌ಸ್ಟಾಲ್ ಆದ ಬಳಿಕ, ನಿಮ್ಮ ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಿ.
ನೆಟ್ ಮೀಟರ್ ಅಳವಡಿಕೆ ಮತ್ತು ನಿಮ್ಮ ಹತ್ತಿರದ ಎಸ್ಕಾಂ ಪರಿಶೀಲಿಸಿದ ಬಳಿಕ ಪೋರ್ಟಾಲ್‌ನಲ್ಲಿ ಕಮಿಷನಿಂಗ್ ಪ್ರಮಾಣ ಪತ್ರ ಸೃಷ್ಟಿಯಾಗಲಿದೆ.
ಒಂದು ಸಲ ಕಮಿಷನಿಂಗ್ ಪ್ರಮಾಣ ಪತ್ರ ಪಡೆದ ಮೇಲೆ ಪೋರ್ಟಲ್‌ನಲ್ಲಿ ಬ್ಯಾಂಕ್ ಖಾತೆಯ ವಿವರಗಳು ಮತ್ತು ರದ್ಧುಪಡಿಸಿದ ಚೆಕ್ ಅನ್ನು ಅಪ್‌ಲೋಡ್ ಮಾಡಿ. ಅದಾದ 30 ದಿನಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಬರಲಿದೆ.