ನವದೆಹಲಿ,ಮೇ.7: ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದಲೇ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾರೆ,ಈ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು ತಪ್ಪಿತಸ್ತರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣರಂತಹ ವ್ಯಕ್ತಿಗಳ ವಿರುದ್ಧ ನಾವು ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದೇವೆ. ಈ ರೀತಿಯ ವ್ಯಕ್ತಿಗಳ ವಿರುದ್ಧ ನಾವು ಶೂನ್ಯ ಸಹಿಷ್ಣುರಾಗಿದ್ದೇವೆ. ಪ್ರಜ್ವಲ್ ದೇಶದಿಂದ ಹೊರಹೋಗಲು ಕರ್ನಾಟಕದ ಕಾಂಗ್ರೆಸ್ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ.ಇದು ಕಾನೂನು ಸುವವ್ಯವಸ್ಥೆಗೆ ಸಂಬಂಧಿಸಿದ ವಿಷಯವಾದ ಕಾರಣ ಕ್ರಮ ವಹಿಸುವ ಜವಾಬ್ಧಾರಿ ಕೂಡಾ ಆ ಸರ್ಕಾರದ ಮೇಲಿದೆ ಎಂದು ತಿಳಿಸಿದರು.
ಸಹಸ್ರಾರು ವಿಡಿಯೋಗಳು ಇದೆ ಎಂದಾದರೆ ಅವು ಜೆಡಿಎಸ್ ಪಕ್ಷ ಕಾಂಗ್ರಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಅವಧಿಗೆ ಸೇರಿದೆ ಎನ್ನುವುದು ಗೊತ್ತಾಗುತ್ತಿದೆ. ಅವರು ಅಧಿಕಾರದಲ್ಲಿದ್ದಾಗ ವಿಡಿಯೋಗಳನ್ನ ಸಂಗ್ರಹಿಸಿದ್ದರು, ಒಕ್ಕಲಿಗರು ಮತದಾನ ಹಕ್ಕನ್ನು ಚಲಾಯಿಸಿದ ನಂತರ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ಸಂದರ್ಭದಲ್ಲಿ ಈ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ ಅದೂ ಪ್ರಜ್ವಲ್ ಅವರನ್ನು ದೇಶದಿಂದ ಹೊರಗೆ ಕಳುಹಿಸಿದ ಮೇಲೆಯೇ ವಿಡಿಯೋ ರಿಲೀಸ್ ಮಾಡಲಾಗಿದೆ.ಇದೆಲ್ಲಾ ಬೆಳವಣಿಗೆ ನೋಡಿದರೆ ಅನುಮಾನಾಸ್ಪದವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಬಳಿ ಮಾಹಿತಿ ಇದ್ದಿದ್ದರೆ ಅದರ ಬಗ್ಗೆ ಒಂದು ಕಣ್ಣಿಡಬೇಕಿತ್ತು ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಡಬೇಕಿತ್ತು. ರಾಜ್ಯ ಸರ್ಕಾರ ಏನನ್ನೂ ಮಾಡಲಿಲ್ಲ, ಕೇಂದ್ರ ಸರ್ಕಾರಕ್ಕೂ ಯಾವುದೇ ಮಾಹಿತಿ ನೀಡಲಿಲ್ಲ, ಇದೆಲ್ಲ ರಾಜಕೀಯ ಆಟ ಎಂದು ಮೋದಿ ಟೀಕಾಪ್ರಹಾರ ನಡೆಸಿದರು.
ಅಪರಾಧಿಗಳನ್ನ ಬಿಡಬಾರದು. ನಮ್ಮ ದೇಶದಲ್ಲಿ ಇಂತಹ ಆಟಗಳನ್ನ ಕೊನೆಗೊಳಿಸಬೇಕು, ಇಂತಹ ವ್ಯಕ್ತಿಗಳ ವಿರುದ್ಧ ತುಸು ಸಹನೆ ಕೂಡ ತೋರಬಾರದು. ಕಾನೂನಡಿ ಎಲ್ಲಾ ಆಯ್ಕೆಗಳನ್ನು ಬಳಕೆ ಮಾಡಿ ಕಠಿಣ ಶಿಕ್ಷೆ ನೀಡಬೇಕು. ಪ್ರಜ್ವಲ್ ಅವರನ್ನು ವಾಪಸ್ ಕರೆತಂದು ಕಠಿಣ ಕ್ರಮ ಆಗಲಿ ಎಂದು ಮೋದಿ ಒತ್ತಾಯಿಸಿದರು.