ಮೈಸೂರು,ಏ.19: ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಪ್ರಾರ್ಥಿಸಿ
ಚಾಮುಂಡಿ ಬೆಟ್ಟಕ್ಕೆ ಮಹಿಳೆಯರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಚಾಮುಂಡಿ ನಡಿಗೆ ವಿಜಯದ ಕಡೆಗೆ ಎಂಬ ಘೋಷವಾಖ್ಯದಡಿ ಈ ಪಾದಯಾತ್ರೆ ಯನ್ನು ಏ.21ರಂದು ಬೆಳಿಗ್ಗೆ 6ಗಂಟೆಗೆ ಬೆಟ್ಟದ ಪಾದದಿಂದ ಪ್ರಾರಂಭಿಸಲಾಗುವುದು ಎಂದು ಬಿಜೆಪಿ ಮಹಿಳಾ ಮೋರ್ಚಾ ಸಂಚಾಲಕಿ ಹೇಮ ನಂದೀಶ್ ತಿಳಿಸಿದ್ದಾರೆ
ಪಾದಯಾತ್ರೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು,ಇದೇ
ಭಾನುವಾರದಂದು ಮೈಸೂರು ಮಹಾನಗರ ಹಾಗೂ ಗ್ರಾಮಾಂತರ ಭಾಗದಿಂದ ಸುಮಾರು ಮೂರು ಸಾವಿರ ಮಹಿಳೆಯರು ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮೈಸೂರು ಭಾಗದ ಜನರಿಗೆ ತಾಯಿ ಚಾಮುಂಡೇಶ್ವರಿ ಮೇಲೆ ಅತಿಯಾದ ನಂಬಿಕೆ. ಒಡೆಯರ್ ವಂಶದ ಕುಡಿ ಯದುವೀರ್ ಅವರು ಚುನಾವಣೆಗೆ ಪಾದಾರ್ಪಣೆ ಮಾಡಿರುವುದು ನಾಡಿಗೆ ಒಂದು ವಿಶೇಷತೆ.
ಮೈಸೂರು ಯದುವಂಶದ ಇತಿಹಾಸ ಇಂದಿನ ರಾಜಕೀಯ ಅಭಿವೃದ್ಧಿಗೆ ಮಾದರಿಯಾಗಿದೆ.ಮೈಸೂರು ಮಹಾರಾಜರು ನಾಡಿಗೆ ನೀಡಿರುವ ಆಡಳಿತದಿಂದಾಗಿ ಹಾಗೂ ಅದ್ಭುತ ಯೋಜನೆಗಳಿಂದಾಗಿ ಇಂದಿಗೂ ಜನ ನೆನಪು ಮಾಡಿಕೊಳ್ಳುತ್ತಾರೆ.
ಅವರು ಕೊಟ್ಟ ಆಡಳಿತ ಅಭಿವೃದ್ಧಿಯಿಂದಾಗಿ ಇಂದಿಗೂ ನಾಡಿನಲ್ಲಿ ಜನತೆ ನೆಮ್ಮದಿಯಂದ ಇದ್ದಾರೆ. ಆದ್ದರಿಂದ ಈ ಋಣ ತೀರಿಸಲು ನಮಗೊಂದು ಅವಕಾಶ ಒದಗಿದ್ದು, ರಾಜಮನೆತನದ ಕುಡಿ ದೇಶದ ರಕ್ಷಣೆ, ಅಭಿವೃದ್ಧಿ ಮತ್ತು ನರೇಂದ್ರ ಮೋದಿ ಯವರ ಆಡಳಿತ ಮೆಚ್ಚಿ ರಾಜಕೀಯಕ್ಕೆ ಬಂದಿರುವುದು ನಮ್ಮೆಲ್ಲರ ಅದೃಷ್ಟ ಎಂದು ತಿಳಿಸಿದರು.
ತಾಯಿ ಚಾಮುಂಡೇಶ್ವರಿಯನ್ನು ಸ್ಮರಿಸುತ್ತಾ ಮೆಟ್ಟಿಲುಗಳನ್ನು ಏರುವ ಮುಖಾಂತರ ಪ್ರಾರ್ಥನೆಯನ್ನು ಮಾಡಲು ಸಂಕಲ್ಪ ಮಾಡಿದ್ದೇವೆ, ಯದುವೀರ್ ಗೆಲುವಿಗೆ ಚಾಮುಂಡೇಶ್ವರಿ ದೇವಿಯ ಕೃಪೆ ಮುಖ್ಯ ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕು ಎಂದು ಹೇಮಾ ನಂದೀಶ್ ಮನವಿ ಮಾಡಿದ್ದಾರೆ.