ಬೆಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯ ರೂಪಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಗುರುವಾರ ನಗರದ ಜನಪ್ರತಿನಿಧಿಗಳೊಂದಿಗೆ ಮಹತ್ವದ ಪೂರ್ವಭಾವಿ ಸಭೆ ನಡೆಸಿದರು.
ನಗರದ ವಿಕಾಸ ಸೌಧದಲ್ಲಿ ನಡೆದ ಈ ಸಭೆಯಲ್ಲಿ ಬೆಂಗಳೂರಿನ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಂದ ಸಲಹೆಗಳನ್ನು ಆಲಿಸಿದ ಡಿಸಿಎಂ, “ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಪೂರಕವಾದ ಹಾಗೂ ಜನಸಾಮಾನ್ಯರ ನಿರೀಕ್ಷೆಗಳಿಗೆ ಸ್ಪಂದಿಸುವ ಬಜೆಟ್ ಸಿದ್ಧಪಡಿಸಬೇಕು,” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ಥಳೀಯ ಅಗತ್ಯಗಳಿಗೆ ಆದ್ಯತೆ:
ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಐದು ಪಾಲಿಕೆಗಳು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳು ಮತ್ತು ಅಗತ್ಯಗಳ ಬಗ್ಗೆ ಉತ್ತಮ ಅರಿವು ಹೊಂದಿರುತ್ತಾರೆ. ಅವರ ಸಲಹೆಗಳನ್ನು ಕಡ್ಡಾಯವಾಗಿ ಬಜೆಟ್ನಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ತಿಳಿಸಿದರು. ತೆರಿಗೆ ಸೋರಿಕೆ ತಡೆಗಟ್ಟಲು ಇ-ಖಾತಾ ಮತ್ತು ಡಿಜಿಟಲೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವಂತೆ ಅವರು ತಾಕೀತು ಮಾಡಿದರು.
ಸ್ಲಂ ಅಭಿವೃದ್ಧಿಗೆ ಮುಂಬೈ ಮಾದರಿ:
ನಗರದ ಸುಮಾರು 480 ಕೊಳಚೆ ಪ್ರದೇಶಗಳ (ಸ್ಲಂ) ನಿವಾಸಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮುಂಬೈ ಮಾದರಿಯನ್ನು ಅನುಸರಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಮಿತಿ ರಚಿಸಿ, ಸ್ಲಂ ನಿವಾಸಿಗಳ ಪುನರ್ವಸತಿ ಮತ್ತು ಮೂಲಸೌಕರ್ಯಕ್ಕೆ ಬಜೆಟ್ನಲ್ಲಿ ವಿಶೇಷ ಒತ್ತು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗಣ್ಯರ ಉಪಸ್ಥಿತಿ:
ಸಭೆಯಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್ ಮತ್ತು ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು. ಶಾಸಕರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಎಸ್. ಸುರೇಶ್ ಕುಮಾರ್, ಎಸ್.ಟಿ. ಸೋಮಶೇಖರ್, ಎಂ. ಕೃಷ್ಣಪ್ಪ, ಗೋಪಾಲಯ್ಯ, ರಿಜ್ವಾನ್ ಅರ್ಷದ್, ಸತೀಶ್ ರೆಡ್ಡಿ, ಬೈರತಿ ಬಸವರಾಜ್, ಮುನಿರತ್ನ ಸೇರಿದಂತೆ ಹಲವು ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಿದರು.
ಆಡಳಿತಾತ್ಮಕವಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಮುನೀಶ್ ಮೌದ್ಗೀಲ್ ಮತ್ತು ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಾಂತ್ರಿಕ ವಿವರಗಳನ್ನು ನೀಡಿದರು.

