Fri. Mar 6th, 2026

ಡಿ.21 ರ ಪಲ್ಸ್ ಪೋಲಿಯೋ ಯಶಸ್ವಿಗೆ ತಯಾರಿ ಮಾಡಿಕೊಳ್ಳಿ: ದಿನೇಶ್ ಗುಂಡೂರಾವ್ ಸೂಚನೆ

Share this with Friends

ಮೈಸೂರು:ಡಿಸೆಂಬರ್ 21ರಂದು ನಡೆಯಲಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಕ್ತ ತಯಾರಿ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನಗರದ ಚಾಮುಂಡೇಶ್ವರಿ ಸಭಾಂಗಣದಲ್ಲಿ ನಡೆಸಲಾಯಿತು.ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವೈದ್ಯರಿಗೆ ವೇತನ ವಿಳಂಬವಾಗುತ್ತಿದ್ದು, ಈ ವ್ಯತ್ಯಯವನ್ನು ತಡೆಯಲು ತಕ್ಷಣ ಅನುದಾನ ಬಿಡುಗಡೆಗೊಳಿಸುವಂತೆ ಆದೇಶಿಸಿದರು. ಜತೆಗೆ ಜಿಲ್ಲೆಯಲ್ಲಿನ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಸ್ಥಿತಿಗತಿಗಳ ಕುರಿತು ಚರ್ಚಿಸಿ ಕ್ರಮಕ್ಕೆ ಸೂಚಿಸಿದರು.

2024ನೇ ಸಾಲಿನ ಹೋಲಿಸಿದರೆ ಮಾತೃ ಮರಣ ಮತ್ತು ಶಿಶುಮರಣ ಪ್ರಮಾಣದರ ಶೇ.24 ಇಳಿಕೆಯಾಗಿದೆ. ಅದಾಗ್ಯೂ, ವಿಸ್ತೃತವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಪ್ರತಿ ತಾಯಿ-ಮಗುವನ್ನು ಹೆಚ್ಚುವರಿ ಕಾಳಜಿಯಿಂದ ಉಳಿಸುವ ಮೂಲಕ ಸಾವುಗಳಾಗದಂತೆ ಕ್ರಮವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇನ್ನೂ ಜಿಲ್ಲೆಯಲ್ಲಿ ಹಾವು ಮತ್ತು ನಾಯಿ ಕಡಿತದ ಪ್ರಕರಣಗಳು ವರದಿಯಾಗಿದ್ದು, ಅವುಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಔಷಧಗಳ ಲಭ್ಯತೆ, ಮರಣದ ಪ್ರಮಾಣದ ಬಗ್ಗೆ ಚರ್ಚಿಸು,ಔಷಧ ದಾಸ್ತಾನಿಗೆ ಸೂಚಿಸಿದರು.

ಮಕ್ಕಳಿಗೆ ನೀಡುವ ಚುಚ್ಚುಮದ್ದುಗಳಾದ ದಡಾರ ರುಬೆಲ್ಲಾ (ಎಂಆರ್ 1, ಎಂ ಆರ್ 2) ಗುರಿ ಸಾಧನೆಯ ಅಂಕಿಅಂಶಗಳನ್ನು ಪರಿಶೀಲನೆ ನಡೆಸಿ, ಮಾನವ ಸಂಪನ್ಮೂಲ ಕೌನ್ಸಿಲಿಂಗ್‌ ಮೂಲಕ ಹಂಚಿಕೆ ಮಾಡುವುದರ ಜತೆಗೆ ಹೆಚ್ಚುವರಿ ಮಾನವ ಸಂಪನ್ಮೂಲ ನಿಯೋಜನೆಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು, ಅಲ್ಲದೆ, ಡಿಸೆಂಬರ್ 21ರಂದು ನಡೆಯಲಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಕ್ತ ತಯಾರಿ ಮಾಡುವಂತೆಯೂ ಸೂಚಿಸಿದರು.

ಇಲಿಜ್ವರ ಪ್ರಕರಣ ಇಳಿಕೆ:

2025ನೇ ಪ್ರಸಕ್ತ ಸಾಲಿನಲ್ಲಿ ಲೆಪ್ಟೊಸ್ಪೈರೋಸಿಸ್ (ಇಲಿಜ್ವರ) ಪ್ರಕರಣಗಳು ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮ ಮತ್ತು ನಿರಂತರ ಜಾಗೃತಿ ಮೂಡಿಸಿದ್ದರಿಂದ ಗಣನೀಯವಾಗಿ ಇಳಿಕೆಯಾಗಿವೆ. 2024ರಲ್ಲಿ 18.0% ಇದ್ದ ಇಲಿಜ್ವರ‌ ಪ್ರಕರಣಗಳು 2025 ರಲ್ಲಿ 13.8% ಕ್ಕೆ ಇಳಿಕೆಯಾಗಿವೆ. 2025ನೇ ಸಾಲಿನಲ್ಲಿ ಇದುವರೆಗೂ ಇಲಿಜ್ವರ ಪತ್ತೆಗೆ 40% ಹೆಚ್ಚುವರಿ ಪರೀಕ್ಷೆಗಳನ್ನು ಮಾಡಲಾಗಿದೆ. ಅಂದರೆ, 2024ರಲ್ಲಿ 10,068 ಜನರಲ್ಲಿ ಇಲಿಜ್ವರ ತಪಾಸಣೆ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಈ ತಪಾಸಣಾ ಸಂಖ್ಯೆ 14,034ಕ್ಕೆ ಏರಿಕೆಯಾಗಿದೆ.ಇನ್ನೂ ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಇಲಿ ಜ್ವರ ಬಾಧಿತ ಪ್ರದೇಶಗಳಲ್ಲಿ ತೀವ್ರ ಕಣ್ಗಾವಲಿರಿಸಿ, ತಪಾಸಣೆ ಹೆಚ್ಚಿಸಲಾಗಿತ್ತು. ಇದರಿಂದ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.

ಸೋಂಕಿನ ತೀವ್ರತೆ ಇಳಿಕೆ: ಗರಿಷ್ಠ ಮಾನ್ಸೂನ್ ತಿಂಗಳುಗಳಲ್ಲಿ (ಜುಲೈ–ಅಕ್ಟೋಬರ್) ಇಲಿ ಜ್ವರ ಪಾಸಿಟಿವಿಟಿ ಕಡಿಮೆಯಾಗಿದೆ.

ಸಮರ್ಪಕ ಚಿಕಿತ್ಸೆ: ವರದಿಯಾಗುತ್ತಿರುವ ಪ್ರಕರಣಗಳು ಸ್ಪೊರಾಡಿಕ್ ಆಗಿದ್ದು, ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಪ್ರತಿಜೀವಕಗಳ ದಾಸ್ತಾನು ಇರಿಸಲಾಗಿದೆ.

ಹೊಸ ಪರೀಕ್ಷಾ ಕೇಂದ್ರ: ಇಲಿ ಜ್ವರ ಪತ್ತೆಗೆ, ದಕ್ಷಿಣ ಕನ್ನಡದಲ್ಲಿರುವ ರಾಜ್ಯ ರೆಫರೆನ್ಸ್ ಪ್ರಯೋಗಾಲಯವು (ಕೇಂದ್ರದ ಬೆಂಬಲದೊಂದಿಗೆ) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪರೀಕ್ಷೆಗಳನ್ನು ಹೆಚ್ಚಿಸಿರುವುದರಿಂದ ಪಾಸಿಟಿವಿಟಿ ಪ್ರಮಾಣ ಕಡಿಮೆಯಾಗುತ್ತಿರುವುದು ದೃಢವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ ಎಂದಿದ್ದಾರೆ.


Share this with Friends

Related Post