Fri. Mar 6th, 2026

ಪರಿಷತ್ ಚುನಾವಣೆ,ವಿಧಾನಸಭೆ ಉಪ ಚುನಾವಣೆಗೆ ಸಿದ್ದತೆ: ನಿತಿನ್ ನಬೀನ್ ಭೇಟಿಯಾದ ವಿಜಯೇಂದ್ರ

Share this with Friends

ನವದೆಹಲಿ:ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಿದ್ದತೆಗಳ ಕುರಿತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರೊಂದಿಗೆ ಮಾತುಕತೆ ನಡೆಸಿದ್ದು,ಸಂಘಟನಾತ್ಮಕವಾಗಿ ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿತಿನ್ ನಬೀನ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿಯಾದರು. ವಿಶೇಷ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ದೆಹಲಿಗೆ ತೆರಳಿ ನೂತನ ಅಧ್ಯಕ್ಷರೊಂದಿಗೆ ಸೌಹಾರ್ಧಯುತ ಮಾತುಕತೆ ನಡೆಸಿದರು. ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಪಕ್ಷ ನಡೆಸಿದ ಹೋರಾಟ, ಪಕ್ಷದ ನಿಲುವು, ಮಿತ್ರಪಕ್ಷದೊಂದಿಗೆ ಒಟ್ಟಾಗಿ ಹೋರಾಟ ನಡೆಸಿದ್ದನ್ನು ವಿವರಿಸಿದರು.

ನಂತರ ರಾಜ್ಯ ರಾಜಕೀಯದಲ್ಲಿನ ವಿಚಾರಗಳ, ಪಕ್ಷದ ಆಂತರಿಕ ವಿಚಾರಗಳ ಕುರಿತು ಹಾಗು ಮುಂಬರಲಿರುವ ಉಪ ಚುನಾವಣೆಗಳು,‌ಚುನಾವಣೆಗಳ ಸಿದ್ದತೆ ಕುರಿತು ಸಮಾಲೋಚನೆ ನಡೆಸಿದರು.

ರಾಷ್ಟ್ರೀಯ ಅಧ್ಯಕ್ಷರ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರನ್ನು ಇಂದು ಭೇಟಿ ಮಾಡಿದ್ದೇನೆ. ರಾಜ್ಯದ ಪಕ್ಷ ಸಂಘಟನೆ ಸಂಬಂಧ ಸವಿಸ್ತಾರವಾಗಿ ಎಲ್ಲವನ್ನೂ ಚರ್ಚೆ ಮಾಡಿದ್ದೇನೆ. ಬಹಳ ಮುಖ್ಯವಾಗಿ ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ 4 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ನಮ್ಮ ಅಭ್ಯರ್ಥಿಗಳ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಮುಂಬರುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಗಳು, ಜಿಬಿಎ ಚುನಾವಣೆ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದೇನೆ ಎಂದು ತಿಳಿಸಿದರು. ಮುಂದೆ ಯಾವ ನಿಟ್ಟಿನಲ್ಲಿ ಸಾಗಬೇಕೆಂಬ ವಿಷಯದಲ್ಲಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ಶಿವಲಿಂಗೇಗೌಡರು ಒಬ್ಬ ಹಿರಿಯ ಶಾಸಕರು. ಅವರು ಯಾವ ಪಕ್ಷದಲ್ಲಿದ್ದಾರೆಂಬ ಬಗ್ಗೆ ನಾನು ಚರ್ಚಿಸಲು ಹೋಗುವುದಿಲ್ಲ; ವಿಪಕ್ಷದವರು ಹೋರಾಟ ಮಾಡುವುದು, ಸದನದ ಬಾವಿಗೆ ಇಳಿಯುವುದು ಸಹಜ. ಆದರೂ, ಹಿರಿಯ ಶಾಸಕರಾಗಿ ನಮ್ಮ ಶಾಸಕರ ಬಗ್ಗೆ, ಅವರ ಕುಟುಂಬದವರ ಕುರಿತು, ಅವರ ಧರ್ಮಪತ್ನಿ ವಿಷಯದಲ್ಲಿ ಮಾತನಾಡಿದ್ದನ್ನು ಖಂಡಿಸುತ್ತೇನೆ. ಹಿರಿಯ ಶಾಸಕರು ನಮ್ಮಂಥವರಿಗೆ ಮತ್ತು ಮೊದಲ ಬಾರಿ ಗೆದ್ದ ಶಾಸಕರಿಗೆ ಮಾದರಿ ಆಗಿರಬೇಕಾಗುತ್ತದೆ. ಅಂಥ ಹಿರಿಯ ಶಾಸಕರೇ ಈ ರೀತಿ ಹೇಳಿಕೆ ಕೊಟ್ಟು, ಅಡ್ಡದಾರಿಯಲ್ಲಿ ಹೋಗಿ ನಮ್ಮ ಶಾಸಕರಿಗೆ ಅಗೌರವ ತೋರಿದ್ದಾರೆ. ಸದನದ ಪಾವಿತ್ರ್ಯತೆ ಹಾಳು ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಮೆಟ್ರೋ ದರ ಏರಿಕೆಯಿಂದ ಜನತೆಗೆ ಹೊರೆ: 

ಬೆಂಗಳೂರು ಮೆಟ್ರೋ ದರ ಏರಿಕೆಯಿಂದ ಮಹಾನಗರದ ಜನತೆಗೆ ಹೊರೆ ಆಗಲಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ತಿಳಿಸಿದರು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಪರಿಸ್ಥಿತಿ ಏನಾಗಿದೆ ಎಂದು ತಮಗೆಲ್ಲ ಗೊತ್ತಿದೆ. ಬೆಂಗಳೂರು ಮಹಾ ನಗರದಲ್ಲಿ ದಿನೇದಿನೇ ವಾಹನಗಳ ದಟ್ಟಣೆಯಿಂದ ಸಂಚಾರ ಮಾಡಲಸಾಧ್ಯ ಎಂಬಂತಾಗಿದೆ. ಬೆಂಗಳೂರು ನಗರ ಎಂದೊಡನೆ ಅದರ ವಿಚಾರ ಕೇವಲ ಭಾರತದಲ್ಲಷ್ಟೇ ಅಲ್ಲ; ಇಡೀ ಜಗತ್ತಿನಲ್ಲಿ ಚರ್ಚೆ ಆಗುತ್ತದೆ ಎಂದು ತಿಳಿಸಿದರು. ರಾಜ್ಯ ಸರಕಾರವು ಈ ರೀತಿ ಅವೈಜ್ಞಾನಿಕವಾಗಿ ಶಿಫಾರಸು ಮಾಡುವುದು, ದರ ಏರಿಸುವುದು ಗಾಯದ ಮೇಲೆ ಬರೆ ಎಳೆಯುವ ಕೆಲಸ ಎಂದು ಆಕ್ಷೇಪಿಸಿದರು.

ರಾಜ್ಯ ಸರಕಾರವು ಕೇವಲ ಮೆಟ್ರೋ ವಿಚಾರದಲ್ಲಷ್ಟೇ ಅಲ್ಲ; ಕಳೆದ ಎರಡೂವರೆ ವರ್ಷದಲ್ಲಿ ಅಬಕಾರಿ ತೆರಿಗೆ, ಸ್ಟಾಂಪ್ ಡ್ಯೂಟಿ ಸೇರಿ ರಾಜ್ಯದ ಜನರಿಗೆ ಬರೆ ಎಳೆಯುವ ಕೆಲಸವನ್ನೇ ಮಾಡುತ್ತ ಬಂದಿದೆ. ಮೆಟ್ರೋ ದರದ ವಿಚಾರದಲ್ಲೂ ಇದೇರೀತಿ ಮುಂದುವರೆಸಿದ್ದಾರೆ ಎಂದು ಟೀಕಿಸಿದರು.


Share this with Friends

Related Post