ಕೋಲಾರ,ಏ.21: ಹಾಲಿ ಪ್ರಧಾನಿ ಮೋದಿ,ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಜೋಡಿ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಕೋಲಾರದ ಬಂಗಾರಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಪರ ರೋಡ್ ಶೋ ನಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಮಾತನಾಡಿದರು.
ಮೋದಿ ಕೊಟ್ಟ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ದೇವೇಗೌಡರು ರೈಲು ಬಿಟ್ಟಿದ್ದಾರೆ, ಖಾಲಿ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದರೆ ರಾಜ್ಯದ ಪಾಲಿನ ತೆರಿಗೆ ಹಣ ವಾಪಾಸ್ ಯಾಕೆ ಬರಲಿಲ್ಲಾ, ಬರಗಾಲದ ಅನುದಾನ ಏಕೆ ಬರಲಿಲ್ಲ,ಪ್ರವಾಹದ ವೇಳೆ ರಾಜ್ಯದ ಅನುದಾನ ಏಕೆ ಬರಲಿಲ್ಲ ಎಂದು ಸಿದ್ದು ಕಾರವಾಗಿ ಪ್ರಶ್ನಿಸಿದರು
ಮೋದಿಯವರ ಚೊಂಬು ನಿಮಗೆ ಅಕ್ಷಯ ಪಾತ್ರೆಯಂತೆ ಕಾಣಿಸಿದ್ರೆ ರಾಜ್ಯದ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ ಹೇಳಿ ಎಂದು ಸಿಎಂ ಪ್ರಶ್ನೆಗಳ ಸುರಿಮಳೆ ಸುರಿಸಿದರು.
ಶ್ರೀಮಂತರ, ಉದ್ಯಮಿಗಳ ಲಕ್ಷ ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಇದು ಅತೀ ಶ್ರೀಮಂತರ ಅಕ್ಷಯ ಪಾತ್ರೆ. ಭಾರತೀಯರ ಪಾಲಿಗೆ, ನಾಡಿನ ಜನರ ಪಾಲಿಗೆ ಖಾಲಿ ಚೊಂಬು ಅಷ್ಟೆ ಅಲ್ವಾ ದೇವೇಗೌಡರೇ ಎಂದು ಕೇಳಿದರು.
ಹದಿನೈದನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸವನ್ನು ಮೋದಿಯವರ ಖಾಲಿ ಚೊಂಬು ಸಾಕ್ಷಿಯಾಗಿದೆ. ದೇವೇಗೌಡರೇ ಈ ಚೊಂಬು ನಿಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15 ನೇ ಹಣಕಾಸು ಆಯೋಗದಲ್ಲಿ ಆಗಿರುವ ನಷ್ಟ, ಅನ್ಯಾಯವನ್ನು ತುಂಬಿ ಕೊಡಿಸಿ ಅಕ್ಷಯ ಪಾತ್ರೆಯಿಂದ ಉದುರಿಸಿ ನೋಡೋಣ ಎಂದು ಸಿದ್ದು ಸವಾಲು ಹಾಕಿದರು
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೌತಮ್ ಗೆಲುವು ನಿಶ್ಚಿತವಾಗಿದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಬಹುಮತ ನೀಡಿ ಶಾಸಕ ನಾರಾಯಣಸ್ವಾಮಿಯವರಿಗೆ ಹೆಚ್ಚಿನ ಶಕ್ತಿ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ರೋಡ್ ಶೊ ವೇಳೆ ಮೋದಿಯವರು ನಿಮ್ಮ ಅಕೌಂಟಿಗೆ 15 ಲಕ್ಷ ಹಾಕ್ತೀನಿ ಎಂದಿದ್ದರಲ್ಲಾ ಎಷ್ಟು ಹಣ ಬಂತು ಎಂದು ಸಿಎಂ ಕೇಳಿದ್ದಕ್ಕೆ ಜನತೆ ಚೊಂಬು ಎಂದು ಕೂಗಿದರು.ಹೀಗೆ ಪ್ರತಿ ಪ್ರಶ್ನೆಗೂ ಚೊಂಬು ಎಂದು ಜನ ಕೂಗುತ್ತಿದ್ದರು.
ಕೋಲಾರದಲ್ಲಿ ಸಾವಿರ ಎಕರೆ ಜಾಗದಲ್ಲಿ ಕೈಗಾರಿಕಾ ಪಾರ್ಕ್, ಟೌನ್ ಶಿಪ್ ಮಾಡುವ ಬೇಡಿಕೆ ಇದೆ ಈ ಬಗ್ಗೆ ಸಕಾರಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.