Mon. Dec 23rd, 2024

ಅಪಘಾತಗಳಾಗದಂತೆ ತಡೆದು ಅಮೂಲ್ಯ ಜೀವ ಉಳಿಸಿ:ಡಿಸಿ ರಾಜೇಂದ್ರ ಸೂಚನೆ

Share this with Friends

ಮೈಸೂರು, ಫೆ.14: ರಸ್ತೆ ಅಪಘಾತಗಳಾ ಗದಂತೆ ತಡೆದು ಅಮೂಲ್ಯ ಜೀವಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಹೇಳಿದರು

ಉತ್ತಮ ರಸ್ತೆಗಳು, ಸಂಚಾರಿ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತದಿಂದ ಸಾವುಗಳು ಆಗದಂತೆ ತಡೆಗಟ್ಟಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿಸಿ ಮಾತನಾಡಿದರು.

ಮೈಸೂರು ನಗರದಲ್ಲಿ ವಿಶಾಲವಾದ ರಸ್ತೆಗಳಿವೆ,ಆದರೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಅಪಘಾತಗಳು‌ ಹೆಚ್ಚಾಗುತ್ತಿವೆ ಎಂದು ಹೇಳಿದರು.

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದ ಜೆಸಿ ಕಾಲೇಜು ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಅಳವಡಿಸಿದ್ದರಿಂದ 3 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಈ ಅವೈಜ್ಞಾನಿಕ ಹಂಪ್ ಅಳವಡಿಸಿ ಅವಘಡಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.

ರಸ್ತೆಗಳನ್ನು ರಿಪೇರಿ ಹಾಗೂ ಕಾಮಗಾರಿ ಮಾಡುವಾಗ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ರಸ್ತೆ ವೈಟ್ ಟ್ಯಾಪ್ ಗಳು, ಸೂಚನಾ ಫಲಕಗಳನ್ನು ಹಾಕಬೇಕು ಎಂದು ಸೂಚಿಸಿದರು.

ಮೈಸೂರು ಪ್ರವಾಸೋದ್ಯಮಕ್ಕೆ ಹೆಸರಾದ ಜಿಲ್ಲೆ. ಯಾವ ಯಾವ ಪ್ರವಾಸಿ ತಾಣಗಳಿಗೆ ಯಾವ ರಸ್ತೆಯಲ್ಲಿ ಹೋಗಬೇಕು ಎಂಬ ಸೈನ್ ಬೋರ್ಡ್ ಗಳನ್ನು ಅಳವಡಿಸಬೇಕು.
ಅಪಾಯಕಾರಿ ಮರಗಳು ಹಾಗೂ ಕೊಂಬೆಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು.

ಶಿವರಾಂ ಪೇಟೆ ಸರ್ಕಲ್ ನಲ್ಲಿ ಗೂಡ್ಸ್ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸಿಕೊಂಡು ಲೋಡಿಂಗ್ ಅನ್ ಲೋಡಿಂಗ್ ಮಾಡುತ್ತಾರೆ ಪೊಲೀಸ್ ಅಧಿಕಾರಿಗಳು ಇದರ‌ ಬಗ್ಗೆ ಕ್ರಮ ವಹಿಸಬೇಕೆಂದು ಡಿಸಿ ಸೂಚಿಸಿದರು.

ಹೆಲ್ಮೆಟ್ ಧರಿಸದೆ ಇರುವವರು ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೆ ಇರುವವರಿಗೆ ದಂಡ ವಿಧಿಸಿ, ಅವೈಜ್ಞಾನಿಕ ಹಂಪ್ ಗಳನ್ನು ತೆರವುಗೊಳಿಸಿ, ಆಟೋ ಚಾಲಕರು, ಗೂಡ್ಸ್ ವಾಹನಗಳ ಚಾಲಕರು, ಬಸ್ ಚಾಲಕರಿಗೆ ನಿಯಮಿತವಾಗಿ ಕಾರ್ಯಾಗಾರಗಳನ್ನು ಮಾಡಿ ಸುರಕ್ಷತಾ ಚಾಲನಾ ನಿಯಮಗಳ ಕುರಿತು ತರಬೇತಿ ನೀಡಬೇಕು ಎಂದು ಡಾ.ರಾಜೇಂದ್ರ ಸಲಹೆ ನೀಡಿದರು.

ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ರಾದ ಅರ್ಷದ್ ಉರ್ ರೆಹಮಾನ್, ಉಪ ಪೊಲೀಸ್ ಆಯುಕ್ತರಾದ ಜಾಹ್ನವಿ, ಲೋಕೋಪಯೋಗಿ ಇಲಾಖೆಗೆ ಕಾರ್ಯಪಾಲಕ ಅಭಿಯಂತರರಾದ ರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post