Fri. Mar 6th, 2026

ಶಿವಮೊಗ್ಗದಲ್ಲಿ ಮತ್ತೊಂದು ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು

Share this with Friends

ಶಿವಮೊಗ್ಗ : ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಬೆಂಕಿಗಾಹುತಿಯಾಗುತ್ತಿರುವ ಸರಣಿ ಘಟನೆಗಳು ಮುಂದುವರಿದಿದ್ದು, ಶನಿವಾರ ಸಂಜೆ ಹುಲಿಕಲ್ ಘಾಟಿಯಲ್ಲಿ ಕುಂದಾಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ಸೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಚಾಲಕನ ಜಾಗರೂಕತೆಯಿಂದಾಗಿ ಬಸ್‌ನಲ್ಲಿದ್ದ 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ: ‘ಶ್ರೀ ದುರ್ಗಾಂಬ’ ಹೆಸರಿನ ಬಸ್ ಕುಂದಾಪುರದಿಂದ ಶಿವಮೊಗ್ಗದತ್ತ ಸಂಚರಿಸುತ್ತಿತ್ತು. ಸಂಜೆ ಸುಮಾರು 4:45ರ ವೇಳೆಗೆ ಹುಲಿಕಲ್ ಘಾಟಿಯ ಚಂಡಿಕಾಂಬ ದೇಗುಲದ ತಿರುವಿನಲ್ಲಿ ಸಾಗುತ್ತಿದ್ದಾಗ ಇಂಜಿನ್‌ನಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಬಸ್ ನಿಲ್ಲಿಸಿದ ಚಾಲಕ, ಪ್ರಯಾಣಿಕರನ್ನು ಶೀಘ್ರವಾಗಿ ಕೆಳಗಿಳಿಯುವಂತೆ ಸೂಚಿಸಿದ್ದಾನೆ. ಪ್ರಯಾಣಿಕರು ಇಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಬಸ್‌ಗೆ ಆವರಿಸಿದ್ದು, ನೋಡನೋಡುತ್ತಿದ್ದಂತೆಯೇ ವಾಹನ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದೆ.

ಹೆಚ್ಚುತ್ತಿರುವ ಆತಂಕ: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಖಾಸಗಿ ಬಸ್‌ಗಳು ಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. ಇತ್ತೀಚೆಗಷ್ಟೇ ಹೊಸನಗರದ ಸುದೂರು ಬಳಿ ‘ಶ್ರೀ ಅನ್ನಪೂರ್ಣೇಶ್ವರಿ’ ಬಸ್ ಸುಟ್ಟು ಕರಕಲಾಗಿತ್ತು. ಅದಕ್ಕೂ ಮುನ್ನ ಹಿರಿಯೂರು ಮತ್ತು ಹೈದರಾಬಾದ್ ಮಾರ್ಗದಲ್ಲಿ ಸಂಭವಿಸಿದ ಬೆಂಕಿ ಅವಘಡಗಳು ಹಲವಾರು ಸಾವು-ನೋವುಗಳಿಗೆ ಕಾರಣವಾಗಿದ್ದವು.

ಪೊಲೀಸ್ ಭೇಟಿ: ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಜಿನ್‌ನಲ್ಲಿನ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಭೀತಿ ಮೂಡಿಸಿದ್ದು, ಖಾಸಗಿ ಬಸ್‌ಗಳ ಸುರಕ್ಷತಾ ತಪಾಸಣೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


Share this with Friends

Related Post