ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿನ 5884 ಅರಿವು ಕೇಂದ್ರಗಳಲ್ಲಿ ಒಂದು ವರ್ಷ ಕಾಲ ಸಂವಿಧಾನ ಜಾಗೃತಿ ‘ಅರಿವು ಯಾತ್ರೆ’ ಅಭಿಯಾನ ನಡೆಸಲಿದ್ದು, ಅರಿವು ಕೇಂದ್ರಗಳನ್ನು ಸಾಂವಿಧಾನಿಕ ಮೌಲ್ಯಗಳನ್ನು ತಿಳಿಸುವ ಪ್ರಮುಖ ಕೇಂದ್ರಗಳನ್ನಾಗಿ ರೂಪಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಕಾಸಸೌಧದದ ತಮ್ಮ ಕಚೇರಿ ಕೊಠಡಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅರಿವು ಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ʼಸಂವಿಧಾನ ದಿನʼದಂದು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ‘ಅರಿವು ಯಾತ್ರೆ’ ಅಭಿಯಾನದ ಮೂಲಕ ರಾಜ್ಯದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮುದಾಯದಲ್ಲಿ ಸಂವಿಧಾನದ ಮೂಲಭೂತ ಮೌಲ್ಯಗಳಾದ ಸ್ವಾತಂತ್ರ‍್ಯ, ಸಮಾನತೆ, ಬಾಂಧವ್ಯ, ನ್ಯಾಯ ಮತ್ತು ಗೌರವಗಳನ್ನು ದೈನಂದಿನ ಜೀವನದಲ್ಲಿ ಬೇರೂರಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಸಂವಿಧಾನದ ಆಶಯಗಳನ್ನು ಗ್ರಾಮೀಣ ಜನಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇತರೆ ಅನುಷ್ಠಾನ ಇಲಾಖೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಡೀ ವರ್ಷ ಈ ಅಭಿಯಾನವನ್ನು ನಡೆಸಲಿದ್ದು,ಪ್ರತಿ ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಸಂವಿಧಾನಿಕ ಮೌಲ್ಯಗಳನ್ನು ಸಾಂಸ್ಥಿಕಗೊಳಿಸುವುದು; ಗೌರವ, ಸಮಾನತೆ, ಬಾಂಧವ್ಯವನ್ನು ಪಾಲಿಸುವ ಮತ್ತು ಗ್ರಾಮ ಸಭೆಗಳಂತಹ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ನಾಗರಿಕರ ಬಲವನ್ನು ನಿರ್ಮಿಸುವುದು; ಸಮಾಜದ ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಬಾಂಧವ್ಯವು ಅತಿ ಮುಖ್ಯವೆಂಬುದನ್ನು ಒತ್ತಿಹೇಳುವುದು; ಹಕ್ಕುಗಳು ಮತ್ತು ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ನಾಗರಿಕನಿಗೂ ಸಮರ್ಪಕವಾಗಿ ಲಭ್ಯವಾಗುವಂತೆ ಮಾಡುವುದು ಹಾಗೂ ಕರ್ನಾಟಕವನ್ನು ಪ್ರಗತಿಪರ ಸುಧಾರಣೆಗಳಲ್ಲಿ ರಾಷ್ಟ್ರೀಯ ಮಾದರಿಯಾಗಿ ರೂಪಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.
ಅಭಿಯಾನದ ಪ್ರಾರಂಭಿಕ ಹಂತದಲ್ಲಿ 5,884 ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು, ನರೇಗಾ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗುವುದು ಎಂದರು.
ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಪಾಲ್ಗೊಂಡಿದ್ದರು. ಸಂವಿಧಾನ ಪೀಠಿಕೆ ಭಾಗವನ್ನು ವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂವಿಧಾನ ಜಾಗೃತಿ ಹಾಡುಗಳ ಗಾಯನ ಪ್ರಸ್ತುತ ಪಡಿಸಲಾಯಿತು.

