ಬೆಂಗಳೂರು: ಇರಾನ್‌ನ ಸರ್ವಾಧಿಕಾರಿ ಆಡಳಿತದ ವಿರುದ್ಧ ಅಲ್ಲಿನ ಜನರೇ ದಂಗೆ ಎದ್ದಿರುವಾಗ, ಬೆಂಗಳೂರು ಸೇರಿದಂತೆ ಭಾರತದ ವಿವಿಧೆಡೆ ಅವರ ಪರವಾಗಿ ಮುಸ್ಲಿಮರು ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇರಾನ್ ಅಧ್ಯಕ್ಷರಾಗಿದ್ದ ಖಮೇನಿ ಒಬ್ಬ ಸರ್ವಾಧಿಕಾರಿಯಾಗಿದ್ದರು. ಅವರ ಆಡಳಿತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿತ್ತು ಮತ್ತು ಸಾವಿರಾರು ಜನರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಅಂತಹ ವ್ಯಕ್ತಿಯ ಪರವಾಗಿ ಕಾನೂನು ಕೈಗೆತ್ತಿಕೊಂಡು ಮೆರವಣಿಗೆ ಮಾಡುವುದು ಸರಿಯಲ್ಲ. ಇಂತಹ ಪ್ರತಿಭಟನಾಕಾರರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಕನ್ನಡಿಗರ ರಕ್ಷಣೆಗೆ ಮೋದಿ ಸರ್ಕಾರ ಬದ್ಧ:
ಪಶ್ಚಿಮ ಏಷ್ಯಾದ ಸಂಘರ್ಷದ ಪರಿಸ್ಥಿತಿಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ. ಈ ಹಿಂದೆ ಉಕ್ರೇನ್ ಸೇರಿದಂತೆ ವಿವಿಧ ಸಂಘರ್ಷ ಪೀಡಿತ ಪ್ರದೇಶಗಳಿಂದ ಭಾರತೀಯರನ್ನು ಯಶಸ್ವಿಯಾಗಿ ಕರೆತಂದ ಇತಿಹಾಸ ಕೇಂದ್ರ ಸರ್ಕಾರಕ್ಕಿದೆ. ಈ ಬಾರಿಯೂ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯುದ್ಧಕ್ಕೆ ಬೆಂಬಲವಿಲ್ಲ:
“ಭಾರತ ಮತ್ತು ಇಸ್ರೇಲ್ ನಡುವೆ ಉತ್ತಮ ಸಂಬಂಧವಿದೆ. ಹಾಗೆಂದ ಮಾತ್ರಕ್ಕೆ ಭಾರತ ಯಾವುದೇ ದೇಶದ ವಿರೋಧಿಯಲ್ಲ. ಪ್ರಧಾನಿ ಮೋದಿ ಸರ್ಕಾರ ಎಂದಿಗೂ ಯುದ್ಧಕ್ಕೆ ಬೆಂಬಲ ನೀಡಿಲ್ಲ, ಶಾಂತಿಯನ್ನೇ ಬಯಸುತ್ತದೆ. ಯುದ್ಧ ನಿಲ್ಲಬೇಕು ಎಂಬುದೇ ನಮ್ಮ ಆಶಯ” ಎಂದರು. ಇದೇ ವೇಳೆ, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕೂಡಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ, ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅಶೋಕ್ ಆಗ್ರಹಿಸಿದರು.
ಸದನದಲ್ಲಿ ಸರ್ಕಾರದ ವೈಫಲ್ಯಗಳ ಅನಾವರಣ: ರಾಜ್ಯದ ಕಾಂಗ್ರೆಸ್ ಸರ್ಕಾರವು ಆರ್ಥಿಕ ಶಿಸ್ತು ಮರೆತು ರಾಜ್ಯವನ್ನು ಸಾಲದ ಸುಳಿಗೆ ದೂಡುತ್ತಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಪ್ರತಿಯೊಂದು ವೈಫಲ್ಯ ಮತ್ತು ಹಗರಣಗಳನ್ನು ಅಂಕಿ-ಅಂಶಗಳ ಸಮೇತ ಸಮರ್ಥವಾಗಿ ಮಂಡಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಸಾಲ ಮಾಡಿದ್ದಾರೆ. ರಾಜ್ಯದ ಸಾಲ ಈಗಾಗಲೇ 3.5 ಲಕ್ಷ ಕೋಟಿ ರೂ. ತಲುಪಿದ್ದು, ಈ ಸರ್ಕಾರದ ಅವಧಿ ಮುಗಿಯುವ ವೇಳೆಗೆ ಇದು 6 ಲಕ್ಷ ಕೋಟಿ ರೂ. ದಾಟುವ ಆತಂಕವಿದೆ. ಇದರಿಂದ ರಾಜ್ಯದ ಪ್ರತಿ ವ್ಯಕ್ತಿಯ ಮೇಲೆ ಸುಮಾರು 1 ಲಕ್ಷ ರೂ. ಸಾಲದ ಹೊರೆ ಬೀಳಲಿದೆ. ಗುತ್ತಿಗೆದಾರರಿಗೆ ನೀಡಬೇಕಾದ 37,000 ಕೋಟಿ ರೂ. ಬಾಕಿಯನ್ನು ಪಾವತಿಸದೆ ಸರ್ಕಾರ ಸತಾಯಿಸುತ್ತಿದೆ” ಎಂದು ಆರೋಪಿಸಿದರು.
ಕಾಂಗ್ರೆಸ್ ಒಡೆದ ಮನೆ; ಸಚಿವರ ಮೇಲೆ ನಿಗಾ:
“ಕಾಂಗ್ರೆಸ್‌ನಲ್ಲಿ ಶಾಸಕರೇ ಬೀದಿಗೆ ಬಂದು ಧಮಕಿ ಹಾಕುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ನಡುವೆ ಶೀತಲ ಸಮರ ನಡೆಯುತ್ತಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಿಎಂ ಸಿದ್ದರಾಮಯ್ಯ ಅವರು ಎಸ್‌ಪಿ ನೇತೃತ್ವದಲ್ಲಿ ಅನಧಿಕೃತ ತಂಡ ರಚಿಸಿದ್ದಾರೆ. ಫೋನ್ ಟ್ಯಾಪಿಂಗ್ ಮತ್ತು ಅನುದಾನ ಕಡಿತದಂತಹ ಕೆಲಸಗಳು ನಡೆಯುತ್ತಿವೆ. ಇದು ಕಣ್ಣಿಗೆ ಕಾಣದ ‘ಎಸ್‌ಐಟಿ’ಯಂತೆ ಕೆಲಸ ಮಾಡುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.
ಇಲಾಖೆಗಳಲ್ಲಿನ ಅಕ್ರಮ ಮತ್ತು ಜನರ ಸಮಸ್ಯೆ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಈ ಇಲಾಖೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಕಳೆದ ಮೂರು ಬಜೆಟ್‌ಗಳಲ್ಲಿ ಘೋಷಣೆಯಾದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ.
ಕಂದಾಯ ಇಲಾಖೆ: ಕಂದಾಯ ಇಲಾಖೆಯಲ್ಲಿ ‘ಇ-ಖಾತಾ’ ಸಮಸ್ಯೆ ಜನರನ್ನು ಹೈರಾಣಾಗಿಸಿದೆ.
ನಗರದ ಸಮಸ್ಯೆ: ಬೆಂಗಳೂರಿನಲ್ಲಿ ಕಸದ ಸಮಸ್ಯೆ ಮಿತಿಮೀರಿದ್ದು, ಜನಜೀವನ ದುಸ್ತರವಾಗಿದೆ. ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಗ್ಯಾರಂಟಿ ಹೆಸರಲ್ಲಿ ವಂಚನೆ:
“ಚುನಾವಣೆ ವೇಳೆ ಉಳ್ಳವರಿಗೂ ಗ್ಯಾರಂಟಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ ಈಗ ಆರ್ಥಿಕ ಸಂಕಷ್ಟ ಎದುರಾದಾಗ ಉಳ್ಳವರು ಬಿಟ್ಟುಕೊಡಿ ಎಂದು ಕೇಳುತ್ತಿರುವುದು ಜನರಿಗೆ ಮಾಡಿದ ವಂಚನೆ. ಬಿಜೆಪಿ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ನಂತರವೂ ಕೊರತೆಯಿಲ್ಲದ ಬಜೆಟ್ ಮಂಡಿಸಿದ್ದರು. ಆದರೆ ಈಗಿನ ಸರ್ಕಾರ ಪ್ರಣಾಳಿಕೆಯ ಯಾವುದೇ ಭರವಸೆಗಳನ್ನು ಈಡೇರಿಸದೆ ಹಾದಿ ತಪ್ಪುತ್ತಿದೆ. ಈ ಎಲ್ಲಾ ವಿಷಯಗಳ ಕುರಿತು ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುವುದು” ಎಂದು ಅಶೋಕ್ ತಿಳಿಸಿದರು.

