Fri. Mar 6th, 2026

ಗಂಗೂಬಾಯಿ ಹಾನಗಲ್ ಸಂಗೀತ ವಿವಿ ನೂತನ ಕುಲಪತಿಯಾಗಿ ಪ್ರೊ. ಕೆ. ರಾಮಕೃಷ್ಣಯ್ಯ ಪದಗ್ರಹಣ

Share this with Friends

ಮೈಸೂರು: ಇಲ್ಲಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಖ್ಯಾತ ರಂಗಕರ್ಮಿ ಪ್ರೊ. ಕೆ. ರಾಮಕೃಷ್ಣಯ್ಯ ಅವರು ಸೋಮವಾರ (ಫೆಬ್ರವರಿ 23) ಅಧಿಕಾರ ಸ್ವೀಕರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನವರಾದ ರಾಮಕೃಷ್ಣಯ್ಯ ಅವರು, ನೀನಾಸಂ ಪದವೀಧರರಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಡ್ರಾಮಾ) ಹಾಗೂ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಸಮೃದ್ಧ ಶೈಕ್ಷಣಿಕ ಹಿನ್ನೆಲೆ:

ಸುಮಾರು 25 ವರ್ಷಗಳ ಕಾಲ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಇವರ ಮಾರ್ಗದರ್ಶನದಲ್ಲಿ ಇದುವರೆಗೆ 16 ಸಂಶೋಧಕರು ಪಿಎಚ್.ಡಿ ಪೂರೈಸಿದ್ದಾರೆ. ರಂಗಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಇವರು ಮಂಡಿಸಿರುವ ಸಂಶೋಧನಾ ಪ್ರಬಂಧಗಳು ಹಾಗೂ ಪ್ರಕಟಿಸಿರುವ ನಾಲ್ಕು ನಾಟಕಗಳು ಕಲಾ ಲೋಕಕ್ಕೆ ಮಹತ್ವದ ಕೊಡುಗೆಯಾಗಿವೆ.

ಗೌರವ ಮತ್ತು ಪ್ರಶಸ್ತಿಗಳು:

ರಂಗಭೂಮಿಯ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಇವರಿಗೆ 2011ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಸ್ಟೇಟ್ ಫೆಲೋಶಿಪ್ ಹಾಗೂ 2017ರಲ್ಲಿ ರಾಜ್ಯ ಪ್ರಶಸ್ತಿ ಲಭಿಸಿದೆ. 2018ರಲ್ಲಿ ದೆಹಲಿಯಲ್ಲಿ ನಡೆದ 8ನೇ ಥಿಯೇಟರ್ ಒಲಿಂಪಿಕ್ಸ್ ಹಾಗೂ 2024ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಅಂತರಾಷ್ಟ್ರೀಯ ಭಾರತ ರಂಗ ಮಹೋತ್ಸವದಲ್ಲಿ ಇವರು ಭಾಗವಹಿಸಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜಕರಾಗಿ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ಡೀನ್ ಆಗಿ ಹಾಗೂ ಪರ್ಫಾರ್ಮಿಂಗ್ ಆರ್ಟ್ಸ್ ವಿಭಾಗದ ಅಧ್ಯಕ್ಷರಾಗಿ ಇವರು ನಿರ್ವಹಿಸಿದ ಆಡಳಿತಾತ್ಮಕ ಜವಾಬ್ದಾರಿಗಳು ಈಗ ಸಂಗೀತ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಪೂರಕವಾಗಲಿವೆ ಎಂದು ಆಶಿಸಲಾಗಿದೆ.


Share this with Friends

Related Post