ಮೈಸೂರು, ಜು.9: ನಿವೃತ್ತ ನೌಕರರಿಗೆ ಪಿಂಚಣಿ ನೀಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಇ ಪಿ ಎಸ್ 95, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಯತ್ರಿ ಪುರಂ ನಲ್ಲಿರುವ ಭವಿಷ್ಯ ನಿಧಿ ಕಚೇರಿ ಮುಂದೆ ಸಂಘದವರು ಪ್ರತಿಭಟನೆ ನಡೆಸಿದರು.
ನಾವು ನಿವೃತ್ತಿ ಹೊಂದಿದ ನಂತರ ಅತ್ಯಂತ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ ಆದರೆ ನಮಗೆ ಕೇಂದ್ರ ಸರ್ಕಾರ ಮತ್ತು ಭವಿಷ್ಯ ನಿಧಿ ಸಂಸ್ಥೆ ಅನ್ಯಾಯ ಮಾಡುತ್ತಿದೆ ಎಂದು ನೂರಾರು ನೌಕರರು ಈ ವೇಳೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ಕಳೆದ ಎರಡು ವರ್ಷಗಳ ಹಿಂದೆಯೇ ನಿವೃತ್ತ ನೌಕರರಿಗೆ ಪಿಂಚಣಿ ನೀಡುವ ಸಂಬಂಧ ಸ್ಪಷ್ಟ ಆದೇಶ ಹೊರಡಿಸಿ ಅನುಷ್ಠಾನ ಮಾಡುವಂತೆ ಸೂಚನೆ ನೀಡಿದೆ ಆದರೆ ಇದನ್ನು ಕೇಂದ್ರ ಸರ್ಕಾರ ಮತ್ತು ಭವಿಷ್ಯ ನಿಧಿ ಸಂಸ್ಥೆಗಳು ಗಾಳಿಗೆ ತೂರಿವೆ ಎಂದು ಕಿಡಿಕಾರಿದರು.
ಮಾಸಿಕ 9,000 ಪಿಂಚಿಣಿ ಹಾಗೂ ಡಿಎ ನೀಡಬೇಕು, ನಿವೃತ್ತ ಪತಿ, ಪತ್ನಿ ಮರಣ ಹೊಂದಿದರೆ ಶೇ. ನೂರರಷ್ಟು ಪಿಂಚಣಿ ನೀಡಬೇಕು, ಇಪಿಎಸ್ ನಿವೃತ್ತ ನೌಕರರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ನಿವೃತ್ತ ನೌಕರರು ಒತ್ತಾಯಿಸಿದರು.
ಇ ಪಿ ಎಸ್ 95 ಸಮನ್ವಯ ಸಮಿತಿ ನಾಗಪುರದ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಎಂಡೆ,ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪಾಠಕ್, ಸದಸ್ಯ ಹಾಸನದ ರಾಮ ಭದ್ರಯ್ಯ, ಜಿಲ್ಲಾ ಸಮಿತಿ ಅಧ್ಯಕ್ಷ ಸ್ವಾಮಿ ಶೆಟ್ಟಿ, ಉಪಾಧ್ಯಕ್ಷ ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ಆರ್.ಜಿ ಮೋಹನ್ ಕೃಷ್ಣ, ಜಂಟಿ ಕಾರ್ಯದರ್ಶಿ ವಿವೇಕಾನಂದ, ಖಜಾಂಚಿ ಎ.ಪಿ ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಪ್ರತಿಭಟನೆಗೆ ಬಾಗವಹಿಸಿದ ಇಪಿಎಸ್ 95, ರಾಷ್ಟ್ರೀಯ ಸಮನ್ವಯ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಪ್ರಕಾಶ್ ಪಾತಕ್, ಪ್ರತಿಭಟನೆಗೆ ಬಾಗವಹಿಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರಾಮಬದ್ರಯ್ಯ, ಶ್ಯಾಮ್ ರಾವ್, ಮದನ್ ಮೋಹನ್, ಮುಖಂಡರು ನಿವೃತ್ತ ದಾರರು,ಹಲವಾರು ಕಾರ್ಖಾನೆಗಳಿಂದ ಬಾಗವಹಿಸಿದ ಮುಖಂಡರು ಮತ್ತುನಿವೃತ್ತ ಪಿಂಚಣಿದಾರರಿಗೆ ಇಪಿಎಸ್ 95,ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಅಧ್ಯಕ್ಷ ಸ್ವಾಮಿಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನಕ್ರಿಷ್ಣ ಧನ್ಯವಾದ ಸಲ್ಲಿಸಿದ್ದಾರೆ.