ಬೆಂಗಳೂರು: ಕೋಗಿಲು ಕ್ರಾಸ್‌ನಲ್ಲಿ ನೆಲೆಸಿರುವವರು ಬಾಂಗ್ಲಾದೇಶದ ನಿವಾಸಿಗಳು ಎಂಬುದು ಈಗ ಅಧಿಕೃತವಾಗಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವು ಕೂಡಲೇ ರಾಜ್ಯದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾವು ಕೋಗಿಲು ಕ್ರಾಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಅಲ್ಲಿರುವವರೆಲ್ಲರೂ ಅಕ್ರಮ ವಲಸಿಗರು ಎಂದು ಎಚ್ಚರಿಸಲಾಗಿತ್ತು. “ಆಗ ನಮ್ಮ ಮಾತನ್ನು ಕಡೆಗಣಿಸಿದ್ದ ಕಾಂಗ್ರೆಸ್ ಸರ್ಕಾರ, ರಾಹುಲ್ ಗಾಂಧಿ ಅವರ ಮೆಚ್ಚುಗೆ ಗಳಿಸಲು ಅಲ್ಲಿನ ನಿವಾಸಿಗಳಿಗೆ ಮನೆ ನೀಡುವುದಾಗಿ ಘೋಷಿಸಿತ್ತು. ವಸತಿ ಸಚಿವರಂತೂ ನಾಳೆಯೇ ಮನೆ ನೀಡುತ್ತೇವೆ ಎಂದು ಹಠಕ್ಕೆ ಬಿದ್ದಿದ್ದರು. ಆದರೆ ಈಗ ಅವರೆಲ್ಲರೂ ಫ್ರಾಡ್‌ಗಳು ಎಂಬುದು ಜಗಜ್ಜಾಹೀರಾಗಿದೆ” ಎಂದು ಲೇವಡಿ ಮಾಡಿದರು.
ಓಲೈಕೆ ರಾಜಕಾರಣದ ಟೀಕೆ:
“ಕೇರಳ ಚುನಾವಣೆಯಲ್ಲಿ ಲಾಭ ಪಡೆಯಲು ಮತ್ತು ಮುಸ್ಲಿಂ ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿತ್ತು. ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಸಚಿವರು ಹೇಳುತ್ತಿದ್ದರು. ಈಗ ಸತ್ಯಾಂಶ ಹೊರಬಂದಿದ್ದು, ಸರ್ಕಾರ ರಾಜ್ಯಾದ್ಯಂತ ಅಕ್ರಮ ವಲಸಿಗರ ಪತ್ತೆ ಕಾರ್ಯ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಅಲ್ಲದೆ, ಬಿಜೆಪಿಯ ಹೋರಾಟದಿಂದಾಗಿ 300 ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನು ಬಾಂಗ್ಲಾ ನಿವಾಸಿಗಳ ಪಾಲಾಗುವುದು ತಪ್ಪಿದೆ. ಇದು ಬಿಜೆಪಿಯ ಹೋರಾಟಕ್ಕೆ ಸಂದ ಜಯ ಎಂದರು.
ಮುಡಾ ಹಗರಣದ ತನಿಖೆ ಹಳ್ಳ ಹಿಡಿಸುವ ಸಂಚು:
ಮುಡಾದ 3 ಸಾವಿರ ಕೋಟಿ ಹಗರಣದ ಬಗ್ಗೆ ಪ್ರಸ್ತಾಪಿಸಿದ ಅಶೋಕ, “ಹಗರಣದಲ್ಲಿ ಸರ್ಕಾರಕ್ಕೆ ನೆರವಾದ ಅಧಿಕಾರಿಗೆ ಈಗ ಉನ್ನತ ಹುದ್ದೆ ನೀಡಿ ಪುರಸ್ಕರಿಸಲಾಗಿದೆ. ಇದು ಕೇವಲ ಋಣ ತೀರಿಸುವ ಕೆಲಸವಲ್ಲ, ಹಗರಣದ ತನಿಖೆಯನ್ನು ಮುಚ್ಚಿ ಹಾಕುವ ಹುನ್ನಾರ” ಎಂದು ಗಂಭೀರ ಆರೋಪ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಎಲ್ಲ ಬೆಳವಣಿಗೆಗಳಿಗೆ ಉತ್ತರಿಸಬೇಕು ಎಂದು ಅವರು ಪಟ್ಟು ಹಿಡಿದರು.

