Mon. Dec 23rd, 2024

ಅಪ್ಪು 49ನೇ ಹುಟ್ಟುಹಬ್ಬ, ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಾಗರ

Puneeth Rajkumar
Share this with Friends

ಬೆಂಗಳೂರು. ಮಾ.17 : ಇಂದು ಸ್ಯಾಂಡಲ್‌ವುಡ್‌ ನಟ, ಕರ್ನಾಟಕ ರತ್ನ, ಪವರ್‌ ಸ್ಟಾರ್‌ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಅಪ್ಪು ಅವರ 49ನೇ ಜನ್ಮದಿನದ ಹಿನ್ನೆಲೆಯಲ್ಲಿ ದೊಡ್ಡಮನೆ ಕುಟುಂಬಸ್ಥರು ಪುನೀತ್‌ ಸಮಾಧಿ ದರ್ಶನ ಪಡೆದಿದ್ದಾರೆ. ಪುನೀತ್ ರಾಜ್‌ಕುಮಾರ್ ಇಲ್ಲದೇ 3ನೇ ವರ್ಷದ ಹುಟ್ಟುಹಬ್ಬ ಇದಾಗಿದೆ. ಅಪ್ಪು ಸ್ಮಾರಕದ ಬಳಿ ಜನಸಾಗರನೇ ಹರಿದು ಬರುತ್ತಿದೆ.

ನೆಚ್ಚಿನ ನಟ ಜನ್ಮದಿನವನ್ನು ಅಭಿಮಾನಿಗಳು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಶನಿವಾರ ರಾತ್ರಿ 11 ಗಂಟೆಯಿಂದಲೇ ಕಂಠೀರವ ಸ್ಟೂಡಿಯೋಗೆ ಅಪ್ಪು ಫ್ಯಾನ್ಸ್ ಆಗಮಿಸಿ ಅಪ್ಪು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪೊಲೀಸರ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪುನೀತ್‌ ಫೋಟೊ, ಗುಲಾಬಿ ಹೂವನ್ನು ಸಮಾಧಿ ಬಳಿ ಇಟ್ಟು ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಿದ್ದಾರೆ.

ವಿಶೇಷವಾಗಿ ಶುಭಕೋರಿದ ಶಿವಣ್ಣ :
ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಶಿವರಾಜ್‌ಕುಮಾರ್ ಅಪ್ಪುಗೆ ವಿಶೇಷವಾಗಿ ಶುಭಹಾರೈಸಿದ್ದಾರೆ. ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ ಎಂದು ಶಿವಣ್ಣ ಸ್ಮರಿಸಿದ್ದಾರೆ.ಅಪ್ಪು ಆಗಿ ಬಂದು ನೀನು ಪುನೀತ್‌ನಾಗಿ ಎಲ್ಲರ ಮನಸ್ಸಲ್ಲೂ ಭದ್ರವಾಗಿ ಇದ್ದು ಬಿಟ್ಟೆ. ಜನ ನಿನ್ನಲ್ಲಿ ದೇವರನ್ನು ಕಾಣುತ್ತಾರೆ. ಎಷ್ಟೋ ಜನಕ್ಕೆ ನೀನು ಮಾರ್ಗದರ್ಶಿ, ಅವರ ಆರಾಧ್ಯ ದೈವ, ಕೋಟಿ ಕೋಟಿ ಅಭಿಮಾನಿಗಳಿಗೆ ನೀನು ಪವರ್ ಸ್ಟಾರ್ ಎಂದು ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆದರೆ ನನಗೆ ಎಂದೆಂದಿಗೂ ನನ್ನ ಪುಟ್ಟ ತಮ್ಮ. ನನ್ನ ಕೈ ಹಿಡಿದು ನಡೆದ ತಮ್ಮ, ನಿನ್ನ ನಗುವಲ್ಲಿ ನನಗೆ ಸಂತೋಷ ಹುಡುಕಿ ಕೊಟ್ಟ ತಮ್ಮ, ನನ್ನ ಎದೆಯ ಮೇಲೆ ಮಲಗಿದ ತಮ್ಮ, ನನ್ನ ಮನಸಲ್ಲೇ ಸದಾ ರಾಜನಂತೆ ಬಾಳುವ ತಮ್ಮ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಎಂದು ಶಿವಣ್ಣ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಪುನೀತ್‌ರನ್ನು ನಟ ಸ್ಮರಿಸಿದ್ದಾರೆ.


Share this with Friends

Related Post