ಬೆಂಗಳೂರು: ರಾಜ್ಯ ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯ ರಾಜ್ಯದ ವಿವಿಧ ವೈದ್ಯಕಿಯ ಶಿಕ್ಷಣ ಸಂಸ್ಥೆಗಳಿಗೆ ಸರಬರಾಜು ಮಾಡಲು 114 ಮಾಡ್ಯೂಲರ್ ಆಪರೇಷನ್ ಥಿಯೇಟರ್ (ಒಟಿ) ಯಂತ್ರೋಪಕರಣಗಳ ಖರೀದಿಗೆ ಮುಂದಾಗಿದೆ. 176 ಕೋಟಿ ರೂ. ವೆಚ್ಚದಲ್ಲಿ 18 ವೈದ್ಯಕಿಯ ಸಂಸ್ಥೆಗಳಿಗೆ ಈ ಯಂತ್ರಗಳನ್ನು ಖರೀದಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
ವೈದ್ಯಕಿಯ ಶಿಕ್ಷಣ ನಿರ್ದೇಶನಾಲಯದಲ್ಲಿ 114 ಮ್ಯಾಡ್ಯುಲರ್ ಒಟಿ ಉಪಕರಣ ಖರೀದಿಗೆ ಸಂಬಂಧಪಟ್ಟಂತೆ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಮಾ.3ರಂದು ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಆದರೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯಂತೆ ಟೆಂಡರ್ ಪ್ರಕ್ರಿಯೆ ನಡೆಸುವ ಬದಲು, ರ್ನಿದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡಲು ಏಕಾಏಕಿ ಟೆಂಡರ್ ಷರತ್ತುಗಳನ್ನೇ ಬದಲಾಯಿಸಿರುವ ಬಗ್ಗೆ ಗುರುತರ ಆರೋಪಗಳು ಕೇಳಿ ಬಂದಿವೆ. ಕೋಟ್ಯಂತರ ರೂ ಮೊತ್ತದ ಟೆಂಡರ್ ನಡೆಸಬೇಕಾದರೆ ಸರಕಾರದಿಂದ ಅನುಮತಿ ಪಡೆದು ಕೆಟಿಪಿಪಿ ಕಾಯಿದೆಯನ್ವಯ ಜಾಗತಿಕ ಮಟ್ಟದ ಟೆಂಡರ್ ನಡೆಸಬೇಕು. 60 ದಿನ ಕಾಲಾವಕಾಶ ನೀಡಬೇಕು. ಒಂದು ವೇಳೆ ಅಲ್ಪಾವಧಿ ಟೆಂಡರ್ ನಡೆಸಲು ಮುಂದಾದರೆ ಸರಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಇವೆಲ್ಲವನ್ನೂ ಬದಿಗೊತ್ತಿ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಲು ಕೆಲ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನುವ ಆರೋಪವಿದೆ.
“ಆಸ್ಪತ್ರೆಗಳಿಗೆ ಒಟಿ ಸೌಲಭ್ಯವೇನೋ ನೀಡಬಹುದು. ಆದರೆ, ಅವುಗಳ ನಿರ್ವಹಣೆಗೆ ಅಗತ್ಯ ಮಾನವ ಸಂಪನ್ಮೂಲವನ್ನು ಸರ್ಕಾರ ಪೂರೈಸುವುದೇ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.
114 ಒಟಿಗಳ ನಿರ್ವಹಣೆಗೆ ಸುಮಾರು 600 ಸಿಬ್ಬಂದಿ ಅಗತ್ಯವಿದೆ. ಒಟಿಗಳು ಸಿಬ್ಬಂದಿ ಇಲ್ಲದೆ ಮುಚ್ಚುವಂತಾಗದಿದ್ದರೆ ಸಾಕು,’ ಎನ್ನುತ್ತಾರೆ ವೈದ್ಯಕೀಯ ಸಂಸ್ಥೆಯ ಹಿರಿಯ ವೈದ್ಯರೊಬ್ಬರು. ಅಲ್ಲದೆ, “ಈಗಾಗಲೇ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿದೆ. ಇನ್ನೊಂದೆಡೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಸಿಬ್ಬಂದಿಗೆ ಸಂಬಳ ಸಿಗುತ್ತಿಲ್ಲ. ಹೀಗಿರುವಾಗ, ಮಾಡ್ಯೂಲರ್ ಒಟಿ ನಿರ್ಮಾಣವಾದರೆ ಎಷ್ಟರ ಮಟ್ಟಿಗೆ ರೋಗಿಗಳಿಗೆ ಇದರ 1ಸೌಲಭ್ಯ ಸಿಗುತ್ತದೆ,” ಎಂದು ಅವರು ಪ್ರಶ್ನಿಸುತ್ತಾರೆ.
ಹೈಕೋರ್ಟ್ ನೋಟಿಸ್:
ಕರ್ನಾಟಕದ 30 ಜಿಲ್ಲೆಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕಿಯ ವೃತ್ತಿಪರರ ಕೊರತೆ ಉಂಟಾಗಿದೆ. ರಾಜ್ಯವು ಸುಮಾರು 16,500 ಉದ್ಯೋಗಿಗಳ ಕೊರತೆ ಎದುರಿಸುತ್ತಿದೆ ಎಂದು ಫೆಡರೇಶನ್ ಆಪ್ ಇಂಡಿಯನ್ ಚೇಂಬರ್ ಆಂಡ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ವರದಿಯಲ್ಲಿ ತಿಳಿಸಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಯಾವೆಲ್ಲಾ ಆಸ್ಪತ್ರೆಗೆ ಸರಬರಾಜು
ಮಾಡ್ಯೂಲರ್ ಒಟಿಗಳನ್ನು ಹಾಸನ, ಯಾದಗಿರಿ, ಹುಬ್ಬಳ್ಳಿ, ಹಾವೇರಿ, ಬೀದರ್, ಕೊಪ್ಪಳ, ಕಲಬುರಗಿ, ಕಾರವಾರ, ಮಂಡ್ಯ, ಬೆಳಗಾವಿ, ಮೈಸೂರು ವೈದ್ಯಕಿಯ ಕಾಲೇಜು, ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ರಾಜೀವ್ಗಾಂಧಿ ಎದೆರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ನೆಪ್ರೋ ಯುರಾಲಜಿ ಸಂಸ್ಥೆ, ಅಟಲ್ ಬಿಹಾರಿ ವಾಜಪೇಯಿ ವೈದ್ಯಕಿಯ ಕಾಲೇಜುಗಳಿಗೆ ನೀಡಲಾಗುತ್ತಿದೆ.