Mon. Dec 23rd, 2024

ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಗೆಲುವು, ಕತಾರ್‌ನಿಂದ 8 ನೌಕಾಪಡೆ ಅಧಿಕಾರಿಗಳ ಬಿಡುಗಡೆ

Indian Diplomacy
Share this with Friends

ಹೊಸದಿಲ್ಲಿ. ಫೆ.12 : ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರನ್ನು ದೋಹಾ ಸೋಮವಾರ ಬಿಡುಗಡೆ ಮಾಡಿದೆ. ಅವರಲ್ಲಿ ಏಳು ಮಂದಿ ಮಧ್ಯಪ್ರಾಚ್ಯ ದೇಶದಲ್ಲಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ ಮರಳಿದ್ದಾರೆ. ಕೇಂದ್ರ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪದ ನಂತರ ಮರಣದಂಡನೆಯನ್ನು ವಿಸ್ತೃತ ಜೈಲು ಶಿಕ್ಷೆಗೆ ಬದಲಾಯಿಸಲಾಗಿದೆ.

ಕತಾರ್‌ನಲ್ಲಿ ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿತರಾಗಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಎಲ್ಲಾ 8 ಮಂದಿ ಹಿರಿಯ ಅಧಿಕಾರಿಗಳ ಪೈಕಿ ಏಳು ಮಂದಿ ಈಗಾಗಲೇ ಸ್ವದೇಶಕ್ಕೆ ಮರಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಭಾರತಕ್ಕೆ ಬಹು ದೊಡ್ಡ ರಾಜತಾಂತ್ರಿಕ ಗೆಲುವುಗಳಲ್ಲಿ ಒಂದು ಎಂದು ಹೇಳಲಾಗಿದೆ.

ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯ ಪ್ರಜೆಗಳ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಅವರಲ್ಲಿ ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾ ಸೌರಬ್ ವಸಿಷ್ಠ್, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ , ಕಮಾಂಡರ್ ಅಮಿತ್ ನಾಗಪಾಲ್ ಮತ್ತು ನಾವಿಕ ರಾಗೇಶ್ ಅವರನ್ನು ಕತಾರ್‌ನಲ್ಲಿ 2022ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ನೌಕಾ ಪಡೆಯಿಂದ ನಿವೃತ್ತರಾದ ಬಳಿಕ ಅವರು ಕತಾರ್‌ನ ದಹ್ರಾ ಗ್ಲೋಬಲ್ ಎಂಬ ಖಾಸತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕತಾರಿ ಎಮಿರಿ ನೌಕಾ ಪಡೆಗೆ ಇಟಾಲಿಯನ್ ಯು212 ಸಬ್‌ಮೆರಿನ್‌ಗಳನ್ನು ಪೂರೈಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿತ್ತು. ಆದರೆ ಭಾರತ ಮೂಲದ ಈ ಎಂಟು ಮಂದಿಯನ್ನು ದಿಢೀರನೆ ಬಂಧಿಸಲಾಗಿತ್ತು.

ರೈತ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ

2023ರ ಅಕ್ಟೋಬರ್‌ನಲ್ಲಿ ಕತಾರ್ ನ್ಯಾಯಾಲಯವು ಎಲ್ಲಾ ಎಂಟು ಮಂದಿಗೆ ಮರಣದಂಡನೆ ವಿಧಿಸಿತ್ತು. ಇದು ಭಾರತಕ್ಕೆ ತೀವ್ರ ಆಘಾತ ಮೂಡಿಸಿತ್ತು. ಅವರ ಬಂಧನ ಹಾಗೂ ಶಿಕ್ಷೆಗೆ ನಿಖರ ಕಾರಣವನ್ನು ಅಲ್ಲಿನ ಸರ್ಕಾರ ಬಹಿರಂಗಪಡಿಸಿರಲಿಲ್ಲ. ಭಾರತ ಸರ್ಕಾರ ಕೂಡ ಈ ಆರೋಪಗಳನ್ನು ಬಹಿರಂಗಪಡಿಸಿಲ್ಲ. ಆದರೆ ಸಬ್‌ಮೆರಿನ್ ಕುರಿತು ಇಸ್ರೇಲ್‌ಗೆ ಮಾಹಿತಿ ನೀಡುವ ಗೂಢಚಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಕೂಡಲೇ ಮಧ್ಯಪ್ರವೇಶ ಮಾಡಿದ್ದ ಭಾರತ ಸರ್ಕಾರ, ಅವರನ್ನು ಕಾಪಾಡಲು ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲಿಸುವುದಾಗಿ ತಿಳಿಸಿತ್ತು. ಭಾರತದ ರಾಜತಾಂತ್ರಿಕ ಹಸ್ತಕ್ಷೇಪದ ಬಳಿಕ ಕತಾರ್ ನ್ಯಾಯಾಲಯವು ಕಳೆದ ಡಿಸೆಂಬರ್‌ನಲ್ಲಿ ಮರಣದಂಡನೆಯಿಂದ ಶಿಕ್ಷೆ ಪ್ರಮಾಣವನ್ನು ತಗ್ಗಿಸಿತ್ತು.


Share this with Friends

Related Post