ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾಗುವ ಔಷಧಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ‘ಕ್ವಾರಂಟೀನ್ ಪಾಲಿಸಿ’ ಸೇರಿದಂತೆ ಹಲವು ಕ್ರಾಂತಿಕಾರಿ ಬದಲಾವಣೆಗಳನ್ನು ತರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಮಂಗಳವಾರ ಸದಸ್ಯರಾದ ಡಾ. ಧನಂಜಯ ಸರ್ಜಿ ಹಾಗೂ ಪ್ರತಾಪಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧ ಸರಬರಾಜು ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಗುಣಮಟ್ಟ ಪರೀಕ್ಷೆ ಕಡ್ಡಾಯ:
“ಹಿಂದೆ ಔಷಧ ಪೂರೈಕೆಯಾದ ನಂತರ ನೇರವಾಗಿ ಆಸ್ಪತ್ರೆಗಳಿಗೆ ಹೋಗುತ್ತಿತ್ತು. ಆದರೆ ಈಗ ಪೂರೈಕೆಯಾದ ಪ್ರತಿ ಬ್ಯಾಚ್ ಔಷಧಿಯನ್ನು ಮೊದಲು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣವಾದ ನಂತರವೇ ಅವುಗಳನ್ನು ಆಸ್ಪತ್ರೆಗಳಿಗೆ ಕಳುಹಿಸುವ ‘ಕ್ವಾರಂಟೀನ್ ಪಾಲಿಸಿ’ ಜಾರಿಗೆ ತಂದಿದ್ದೇವೆ” ಎಂದು ಸಚಿವರು ಸ್ಪಷ್ಟಪಡಿಸಿದರು.
ಐಎಎಸ್ ಅಧಿಕಾರಿ ನೇತೃತ್ವ:
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (KSMCL) ಕಾರ್ಯವೈಖರಿ ಸುಧಾರಿಸಲು ಐಎಎಸ್ ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಟೆಂಡರ್ ಪ್ರಕ್ರಿಯೆಯಲ್ಲಿ ‘ಹಳೆಯ ಅನುಭವ’ (Past Performance) ಎಂಬ ನಿಯಮದಡಿ ಕೆಲವು ಸಂಸ್ಥೆಗಳಷ್ಟೇ ಲಾಭ ಪಡೆಯುತ್ತಿದ್ದವು. ಈಗ ಹೊಸಬರಿಗೂ ಅವಕಾಶ ನೀಡುವ ಮೂಲಕ ಪಾರದರ್ಶಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಎಕ್ಸ್‌ಪೈರಿ ತಡೆಗೆ ಹೊಸ ಪ್ಲಾನ್:
“ಹಿಂದೆ ಇಡೀ ವರ್ಷಕ್ಕೆ ಬೇಕಾದ ಔಷಧವನ್ನು ಒಮ್ಮೆಯೇ ಖರೀದಿಸುತ್ತಿದ್ದ ಕಾರಣ ಬಳಕೆಯಾಗದೆ ಅವುಗಳು ಅವಧಿ ಮುಗಿಯುತ್ತಿದ್ದವು (Expiry). ಈಗ ಶೇ. 25ರ ಅನುಪಾತದಲ್ಲಿ ವರ್ಷವಿಡೀ ನಿಯಮಿತವಾಗಿ ಪೂರೈಸಲು ಸೂಚಿಸಲಾಗಿದೆ. ಇದರಿಂದ ಔಷಧಗಳ ವ್ಯರ್ಥವಾಗುವುದನ್ನು ತಡೆಗಟ್ಟಬಹುದು” ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಇ-ಔಷಧಿ ಸಾಫ್ಟ್‌ವೇರ್:
ರಾಜ್ಯದ ಯಾವ ಆಸ್ಪತ್ರೆಯಲ್ಲಿ ಯಾವ ಔಷಧದ ದಾಸ್ತಾನು ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ‘ಇ-ಔಷಧಿ’ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಸದ್ಯ ಕೆಎಸ್‌ಎಂಸಿಎಲ್ ಮೂಲಕ 534 ಔಷಧಗಳನ್ನು ಖರೀದಿಸಲಾಗುತ್ತಿದ್ದು, ತಾಲೂಕು ಆಸ್ಪತ್ರೆಗಳಲ್ಲಿ 98, ಸಮುದಾಯ ಕೇಂದ್ರಗಳಲ್ಲಿ 73 ಹಾಗೂ ಪಿಹೆಚ್‌ಸಿಗಳಲ್ಲಿ 53 ಅಗತ್ಯ ಔಷಧಗಳು ಲಭ್ಯವಿವೆ ಎಂದು ಅವರು ಅಂಕಿಅಂಶ ನೀಡಿದರು.

