ಬೆಂಗಳೂರು: ಬಳ್ಳಾರಿ ಘಟನಾವಳಿ, ಒಂದು ಸಾವಿಗೆ ಶಾಸಕ ಭರತ್ ರೆಡ್ಡಿಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು,ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಗೂಂಡಾಗಳು ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆ ಗುಂಡಿನ ದಾಳಿ ಮಾಡಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹೊಸ ವರ್ಷಾಚರಣೆ ವೇಳೆ ಮುಖ್ಯಮಂತ್ರಿಗಳು ದುರ್ಘಟನೆ ನಡೆಯದಂತೆ ಪೊಲೀಸರು ನೋಡಲಿದ್ದಾರೆಂದು ಭರವಸೆಯ ಮಾತಾಡಿದ್ದಾರೆ. ಅವರು ಹೇಳಿದ ಒಂದೇ ದಿನಕ್ಕೆ ಬಳ್ಳಾರಿಯಲ್ಲಿ ಗುಂಡುಗಳ ದಾಳಿ (ಫೈರಿಂಗ್) ನಡೆದಿದೆ.ಇದು ರಾಜ್ಯದ ಕಾನೂನು- ಸುವ್ಯವಸ್ಥೆ ಕುಸಿತಕ್ಕೆ ಕೈಗನ್ನಡಿ ಎಂದರು.
ಜನಾರ್ದನ ರೆಡ್ಡಿ ಕಾಂಪೌಂಡ್ ಒಳಗೆ ಬಂದು ಫ್ಲೆಕ್ಸ್ ಹಾಕಿದ್ದಾರೆ. ಅದಾದ ಬಳಿಕ ಜನಾರ್ದನ ರೆಡ್ಡಿ ಮನೆಯವರು ದೂರು ನೀಡಿದ್ದಾರೆ. ಪೊಲೀಸರು ಬಂದು ತೆರವುಗೊಳಿಸಿದ್ದಾರೆ. ನಂತರ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರು ಬಂದು ರಸ್ತೆ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತು ಗೇಟ್ ಒಳಗೆ ನುಗ್ಗಿ ಫ್ಲೆಕ್ಸ್ ಕಟ್ಟಿಸಿದ್ದಾರೆ. ಇದರಲ್ಲಿ ಜನಾರ್ದನ ರೆಡ್ಡಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ರಕ್ತ ಚರಿತ್ರೆಯಲ್ಲೇ 2026ರ ಪ್ರಾರಂಭವಾಗಿದೆ. ಆಂಧ್ರ ಮಾದರಿಗೆ ಹೋಗುವ ಸಂದೇಶವನ್ನು ಈ ದುರುಳ ಸರಕಾರವು ಕೊಟ್ಟಿದೆ. ಈ ಘಟನೆ ಆದಾಗ ಜನಾರ್ದನ ರೆಡ್ಡಿ ಮನೆಯಲ್ಲಿ ಇರಲಿಲ್ಲ.ಮಾಜಿ ಸಚಿವರು ಮತ್ತು ಶಾಸಕರಾದ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಪ್ರಾಣಾಪಾಯ ಇದೆ. ಕೂಡಲೇ ಅವರಿಗೆ ಪೊಲೀಸ್ ರಕ್ಷಣೆ ಕೊಡಬೇಕು. ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ಮಾಡಬೇಕೆಂದು ಅಶೋಕ್ ಆಗ್ರಹಿಸಿದರು.
ಜನಾರ್ಧನ ರೆಡ್ಡಿ ಬೆಂಬಲಿಗರ ಮನೆಗೆ ಅಕ್ರಮವಾಗಿ ನುಗ್ಗಿದ ಕಾಂಗ್ರೆಸ್ಸಿನವರನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಬಳ್ಳಾರಿ ಘಟನಾವಳಿ, ಒಂದು ಸಾವಿಗೆ ಶಾಸಕ ಭರತ್ ರೆಡ್ಡಿಯೇ ಕಾರಣ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಒಂದೆಡೆ ಪೊಲೀಸರು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಮಾದರಿಯ ರಕ್ತ ಚರಿತ್ರೆ ಕರ್ನಾಟಕಕ್ಕೂ ಕಾಲಿಟ್ಟಿದೆ. ರಾಜಕೀಯವಾಗಿ ಗುಂಡು ಹಾರಿಸುವ ಸಂಸ್ಕೃತಿ ಕರ್ನಾಟಕದಲ್ಲಿ ಇರಲಿಲ್ಲ; ಇವತ್ತು ಅದಕ್ಕೂ ನಾಂದಿ ಹಾಡಿದ್ದಾರೆ ಎಂದು ಟೀಕಿಸಿದರು.

