Fri. Mar 6th, 2026

2030ರ ವೇಳೆಗೆ ರೇಬೀಸ್ ಮುಕ್ತ ಕರ್ನಾಟಕ: ಸಚಿವ ದಿನೇಶ್ ಗುಂಡೂರಾವ್ ಗುರಿ

Share this with Friends

ಬೆಂಗಳೂರು: ರಾಜ್ಯದಲ್ಲಿ ರೇಬೀಸ್ ಸಾವುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ಮತ್ತು ಹಾವು ಕಡಿತದ ಪ್ರಕರಣಗಳಿಗೆ ತುರ್ತು ಚಿಕಿತ್ಸೆ ಖಚಿತಪಡಿಸಲು ಆರೋಗ್ಯ ಇಲಾಖೆ ಮಹತ್ವದ ‘ರಾಜ್ಯ ಕ್ರಿಯಾ ಯೋಜನೆ’ಗೆ ಚಾಲನೆ ನೀಡಿದೆ.

ಈ ಸಂಬಂಧ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, “2030ರ ವೇಳೆಗೆ ರಾಜ್ಯದಲ್ಲಿ ರೇಬೀಸ್ ಸಾವುಗಳ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಆಂಟಿ ರೇಬೀಸ್ ಲಸಿಕೆ ಹಾಗೂ ಇಮ್ಯುನೋಗ್ಲೋಬುಲಿನ್ ದಾಸ್ತಾನು ಇರಿಸುವುದನ್ನು ಕಡ್ಡಾಯಗೊಳಿಸಲಾಗಿದೆ,” ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೂ ಕಟ್ಟುನಿಟ್ಟಿನ ಸೂಚನೆ:

ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆಗಳು ಲಭ್ಯವಿರಬೇಕು. ತುರ್ತು ಸಂದರ್ಭದಲ್ಲಿ ಬರುವ ರೋಗಿಗಳಿಗೆ ಮುಂಗಡ ಹಣಕ್ಕಾಗಿ ಒತ್ತಾಯಿಸದೆ ತಕ್ಷಣ ಚಿಕಿತ್ಸೆ ನೀಡುವುದು ಕಡ್ಡಾಯ. ಇದರ ಮೇಲ್ವಿಚಾರಣೆಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಜಂಟಿ ಸಮಿತಿಗಳನ್ನು ರಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಹಾವು ಕಡಿತ ಈಗ ‘ಘೋಷಿತ ಕಾಯಿಲೆ’:

ವಿಷಪೂರಿತ ಹಾವು ಕಡಿತದಿಂದ ಸಂಭವಿಸುವ ಸಾವು ಮತ್ತು ಅಂಗವಿಕಲತೆಯನ್ನು ತಡೆಗಟ್ಟಲು ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 2024ರಲ್ಲಿಯೇ ಹಾವು ಕಡಿತವನ್ನು ‘ಘೋಷಿತ ಕಾಯಿಲೆ’ (Notifiable Disease) ಪಟ್ಟಿಗೆ ಸೇರಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಸಹ ಜೀವ ಉಳಿಸುವ ಚಿಕಿತ್ಸೆ ನೀಡಲು ವಿಳಂಬ ಮಾಡಬಾರದು ಎಂದು ಸಚಿವರು ಈ ಸಂದರ್ಭದಲ್ಲಿ ಎಚ್ಚರಿಸಿದರು.

ವಿವಿಧ ಇಲಾಖೆಗಳು ಹಾಗೂ ಎನ್‌ಜಿಒಗಳ ಸಹಯೋಗದೊಂದಿಗೆ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯಾರೂ ಪ್ರಾಣ ಕಳೆದುಕೊಳ್ಳಬಾರದು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಅವರು ತಿಳಿಸಿದರು.

 


Share this with Friends

Related Post