ಮೈಸೂರು, ಮಾ.29: ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ 104.8 ರೇಡಿಯೋ ಮಿರ್ಚಿ ಚಾನೆಲ್ ನಲ್ಲಿ ಜಾಹಿರಾತಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಮಾತುಗಳನ್ನು ಸ್ಥಗಿತಗೊಳಿಸಲಾಗಿದೆ.
ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಅವರು ಮೈಸೂರು ಸಂಸ್ಥಾನದ ಇತಿಹಾಸದ ಬಗ್ಗೆ ಸಂದರ್ಶನದ ರೂಪದಲ್ಲಿ ರಾಜರಿಂದಲೇ ರಾಜರ ಕಥೆಗಳು ಎಂಬ ಶೀರ್ಷಿಕೆಯಲ್ಲಿ ಮಾತನಾಡುವುದಕ್ಕೆ ಹಾಗೂ ಮಾತನಾಡುವ ಬಗ್ಗೆ ಕ್ಷಣ ಕ್ಷಣಕ್ಕೂ ರೇಡಿಯೋದಲ್ಲಿ ಪ್ರಚಾರಪಡಿಸುವ ಜಾಹೀರಾತನ್ನು ಸ್ಥಗಿತ ಗೊಳಿಸಲಾಗಿದೆ.
ಒಬ್ಬ ವ್ಯಕ್ತಿಯಾಗಿ ರಾಜರ ಬಗ್ಗೆ ಮಾತನಾಡುವುದರಲ್ಲಿ ತಪ್ಪಿಲ್ಲ,ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ.
ಯದುವೀರ್ ಅವರ ಮಾತುಗಳು ಮತದಾರರ ಮೇಲೆ ಪರಿಣಾಮ ಬೀರುವುದರಿಂದ ಕೂಡಲೇ ರೇಡಿಯೋದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನಿರ್ಬಂಧನೆ ವಿಧಿಸಬೇಕೆಂದು ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಹಾಗೂ ಚುನಾವಣಾ ಆಯೋಗಕ್ಕೆ ಕೆಪಿಸಿಸಿ ತಿಳಿಸಿತ್ತು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಹಾಗೂ ರೇಡಿಯೋ ಮಿರ್ಚಿ ಚಾನೆಲ್104.8 ಚಾನಲ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರರಾದ ಎಚ್.ಎ. ವೆಂಕಟೇಶ್ ತಿಳಿಸಿದ್ದಾರೆ.